ಬೆಂಗಳೂರು: ನಾಡಿನ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎಸ್.ಎಲ್.ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿಯವರು ಹೇಳಿದ್ರು ಎಂದು ಭೈರಪ್ಪ ಅವರ ಸ್ಮಾರಕ ಮಾಡಲ್ಲ. ಮೈಸೂರಿನಲ್ಲೇ ಸ್ಮಾರಕ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಭೈರಪ್ಪ ಅವರು ಬಹುಕಾಲ ಮೈಸೂರಿನಲ್ಲೇ ಕಾಲ ಕಳೆದದ್ದರಿಂದ ಅಲ್ಲೇ ಸ್ಮಾರಕ ಮಾಡುತ್ತೇವೆ ಎಂದು ತಿಳಿಸಿದರು.
ಭೈರಪ್ಪ ಅವರು ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಕಷ್ಟಪಟ್ಟು ಮೇಲೆ ಬಂದು, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದವರು. ಭೋದನೆ ಮಾಡುತ್ತಲೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಸಾಮಾನ್ಯವಾಗಿ ಎರಡೂ ಕೆಲಸ ಮಾಡುವುದು ಕಷ್ಟ. ಭೋದನೆ ಮಾಡುತ್ತಿದ್ದರೂ ಅವರಿಗೆ ಸಾಹಿತ್ಯದ ಮೇಲೆ ಹೆಚ್ಚು ಆಸಕ್ತಿಯಿತ್ತು. ಅವರ ನಿಧನದಿಂದ ಇಂದು ಸಾರಸತ್ವ ಲೋಕ ಬಡವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.





