Mysore
26
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಸೆಪ್ಟೆಂಬರ್.‌22ರಿಂದ ಮರು ಜಾತಿಗಣತಿ ನಡೆಸಲು ರಾಜ್ಯ ಸರ್ಕಾರ ನಿರ್ಧಾರ

JDS weak party : CM siddaramaiah

ಬೆಂಗಳೂರು: ತೀವ್ರ ವಿವಾದಕ್ಕೆ ಗುರಿಯಾಗಿದ್ದ ಜಾತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಮತ್ತೆ ಮುಂದಾಗಿದ್ದು, ಸೆಪ್ಟೆಂಬರ್.22 ರಿಂದ 15 ದಿನಗಳ ಕಾಲ ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಾದ ಪೂರ್ವಭಾವಿ ಸಭೆ ನಡೆಯಿತು.

ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದರಂತೆ ರಾಜ್ಯದ 7 ಕೋಟಿ ಜನರ ಸಮೀಕ್ಷೆ ನಡೆಸಲಾಗುವುದು. ಜಾತಿ ತಾರತಮ್ಯ ನಿವಾರಣೆ ಮಾಡುವುದು ಗಣತಿಯ ಮುಖ್ಯ ಉದ್ದೇಶ ಎಂದರು.

ರಾಜ್ಯದ ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಜಮೀನಿನ ಒಡೆತನ ಸೇರಿದಂತೆ ಸಮಗ್ರ ಸಮೀಕ್ಷೆ ನಡೆಸಲಾಗುವುದು. ಈ ಸಮೀಕ್ಷೆ ವರದಿ ಮುಂದಿನ ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಆಧಾರವಾಗಲಿದೆ. ಈ ಬಾರಿಯ ಸಮೀಕ್ಷೆ ದೇಶದಲ್ಲೇ ಮಾದರಿ ಸಮೀಕ್ಷೆಯಾಗಬೇಕು ಎಂದು ತಿಳಿಸಿದರು.

ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರೆಗೆ 15 ದಿನಗಳ ಕಾಲ ಸಮೀಕ್ಷೆ ನಡೆಸವುದಾಗಿ ತಿಳಿಸಿರುವ ಅವರು, ಅಕ್ಟೋಬರ್ ಕೊನೆಯ ಒಳಗಾಗಿ ಸಮೀಕ್ಷೆ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ.

ಕಾಂತರಾಜು ಆಯೋಗ 54 ಪ್ರಶ್ನೆಗಳನ್ನು ಸಿದ್ದಪಡಿಸಿ ಆಗ ಸಮೀಕ್ಷೆ ನಡೆಸಿತ್ತು. ಈ ಬಾರಿಯ ಸಮೀಕ್ಷೆಯಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸುವ ಕುರಿತು ಪರಿಶೀಲನೆ ನಡೆಸಲಾಗುವುದು. ಜೊತೆಗೆ ಮೊಬೈಲ್ ಆಪ್ ಬಳಸಿಕೊಂಡು ಸಮೀಕ್ಷೆ ನಡೆಸಲಾಗುವುದು ಎಂದರು.

ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕಿದೆ. ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯ ನೆರವು ಪಡೆಯಬೇಕು ಎಂದು ಆದೇಶಿಸಿದ್ದಾರೆ.

ಈ ಬಾರಿ ಸಮೀಕ್ಷೆ ಕಾರ್ಯಕ್ಕೆ 1.65 ಲಕ್ಷ ಗಣತಿದಾರರು ಸೇರಿದಂತೆ ಮಾನವ ಸಂಪನ್ಮೂಲ ಅವಶ್ಯಕತೆಯಿದ್ದು, ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರ ಸೇವೆಯೊಂದಿಗೆ ಇತರ ಇಲಾಖೆಗಳ ಸಿಬ್ಬಂದಿಗಳನ್ನು ಸಹ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ಆರ್ ನಾಯ್ಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು

Tags:
error: Content is protected !!