ಬೆಂಗಳೂರು: ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಈ ಬಜೆಟ್‌ನ್ನು ಮಂಡಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಇಂದು ಮಂಡನೆಯಾದ ಕೇಂದ್ರ ಸರ್ಕಾರದ ಬಜೆಟ್ ಅನ್ನು ಸ್ವಾಗತಿಸಿದ್ದಾರೆ.
ಪ್ರಮುಖವಾಗಿ ನಮ್ಮ ದೇಶದ ರೈತರು, ಮಧ್ಯಮ ವರ್ಗ, ಸಣ್ಣ ಮತ್ತು ಮಾಧ್ಯಮ ವಲಯದ ಉದ್ಯಮಗಳ ಸಬಲೀಕರಣಕ್ಕೆ ಈ ಬಜೆಟ್ ಒತ್ತು ನೀಡಿದೆ. ಪರಿವರ್ತನೆಯ ನೀತಿಗಳ ಮೂಲಕ ಸಮಗ್ರ ಅಭಿವೃದ್ದಿಯನ್ನು ಖಾತರಿಪಡಿಸುತ್ತದೆ ಎಂದು ಬಿಎಸ್‌ವೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ, ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, ಕೃಷಿ ಜಿಲ್ಲೆಗಳ ಅಭಿವೃದ್ದಿ ಕಾರ್ಯಕ್ರಮ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷ ರೂ. ನಿಂದ 5 ಲಕ್ಷ ರೂ. ಗೆ ಹೆಚ್ಚಿಸಿರುವುದು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ದೇಶದ ಮೂಲಸೌಕರ್ಯಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತವೆ ಎಂದು ಹೇಳಿದ್ದಾರೆ.
ಉತ್ತಮ ಬಜೆಟ್ ಅನ್ನು ಮಂಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.