Mysore
25
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕಾಲ್ತುಳಿತ ಪ್ರಕರಣ : ವಿಕಾಸ್‌ ಕುಮಾರ್‌ ಅಮಾನತ್ತು ರದ್ದುಪಡಿಸಿದ ಸಿಎಟಿ

Stampede case CAT lifts Vikas Kumar's suspension

ಬೆಂಗಳೂರು : ಐಪಿಎಸ್ ಅಧಿಕಾರಿ ವಿಕಾಸ್‍ಕುಮಾರ್ ಅವರ ಅಮಾನತ್ತು ಆದೇಶವನ್ನು ಕೇಂದ್ರ ಆಡಳಿತ ನ್ಯಾಯಾಧಿಕರಣ(ಸಿಎಟಿ) ರದ್ದುಗೊಳಿಸಿದ್ದು, ಈ ಹಿಂದಿನ ಭತ್ಯೆ ಹಾಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದೆ.

ಜೂ.3 ರಂದು ಆರ್‌.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ಸಂಬಂಧ ಕಠಿಣ ಕ್ರಮ ಕೈಗೊಂಡಿದ್ದ ಸರ್ಕಾರ ಬೆಂಗಳೂರಿನ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್‍ಕುಮಾರ್, ಕೇಂದ್ರ ವಲಯದ ಡಿಸಿಪಿ ಎಚ್.ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್‍ಪಾರ್ಕ್‍ನ ಇನ್‍ಸ್ಪೆಕ್ಟರ್ ಎ.ಕೆ.ಗಿರೀಶ್ ಅವರನ್ನು ಜೂ.5 ರಂದು ಅಮಾನತ್ತುಗೊಳಿಸಿತ್ತು.

ಈ ಆದೇಶವನ್ನು ವಿಕಾಸ್‍ಕುಮಾರ್ ಅವರು ಕೇಂದ್ರ ನ್ಯಾಯಾಧಿಕರಣ(ಸಿಎಟಿ)ದಲ್ಲಿ ಪ್ರಶ್ನಿಸಿದ್ದರು. ತೀರ್ಪು ನೀಡಿರುವ ಸಿಎಟಿ ನ್ಯಾ.ಬಿ.ಕೆ.ಶ್ರೀವಾಸ್ತವ ಮತ್ತು ಸಂತೋಷ್ ಮೆಹ್ರಾ ಅವರನ್ನೊಳಗೊಂಡ ಪೀಠ ಅಮಾನತ್ತು ಆದೇಶವನ್ನು ರದ್ದುಗೊಳಿಸಿದೆ.

ಹಿಂದಿನ ಎಲ್ಲಾ ಭತ್ಯೆ ಹಾಗೂ ಸೌಲಭ್ಯಗಳನ್ನು ಮುಂದುವರೆಸಲು ನಿರ್ದೇಶನ ನೀಡಿದೆ. ಉಳಿದ ಇಬ್ಬರು ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ ಮತ್ತು ಎಚ್.ಟಿ.ಶೇಖರ್‍ರವರ ಅಮಾನತ್ತು ಆದೇಶವನ್ನು ಮರುಪರಿಶೀಲಿಸಲು ಸೂಚಿಸಿದೆ.

ವಿಕಾಸ್‍ಕುಮಾರ್ ರವರ ಪರವಾಗಿ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದರು. ಹಿಂದಿನ ವಿಚಾರಣೆಯಲ್ಲಿ ಸಿಎಟಿ ರಾಜ್ಯಸರ್ಕಾರಕ್ಕೆ ನೋಟೀಸ್ ನೀಡಿತ್ತು. ಆಕ್ಷೇಪಣೆ ಸಲ್ಲಿಸಲು ಅಡ್ವೊಕೇಟ್ ಜನರಲ್ ಕಾಲವಕಾಶ ಕೋರಿದ್ದರು. ಇಂದಿನ ವಿಚಾರಣೆಯಲ್ಲಿ ತೀರ್ಪು ಪ್ರಕಟವಾಗಿದೆ. ಅಮಾನತ್ತು ಆದೇಶವನ್ನು ಸಿಎಟಿ ರದ್ದು ಮಾಡಿದ್ದರಿಂದಾಗಿ ರಾಜ್ಯಸರ್ಕಾರಕ್ಕೆ ಮುಖಭಂಗವಾದಂತಾಗಿದೆ.

Tags:
error: Content is protected !!