ಬೆಂಗಳೂರು: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇತ್ತೀಚೆಗೆ ಖರೀದಿ ಮಾಡಿರುವ ಸಾಮಾಗ್ರಿಗಳ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಂಭೀರ ಆರೋಪ ಮಾಡಿದ್ದಾರೆ.
ಯು.ಟಿ.ಖಾದರ್ ಇತ್ತೀಚೆಗೆ ಲೂಟಿ ಖಾದರ್ ಆಗಿದ್ದಾರೆ. ಅವರ ಘನತೆಗೆ, ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಪ್ರತಿಯೊಂದು ನಡವಳಿಕೆಯೂ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದ್ದು, ಇದರ ಬಗ್ಗೆ ತನಿಖೆಯ ಅಗತ್ಯವಿದೆ. ವಿಧಾನಸಭೆಯ ಇತಿಹಾಸದಲ್ಲೇ ಸ್ಪೀಕರ್ ಮೇಲೆ ಇಂತಹ ಆರೋಪಗಳು ಮೊದಲ ಬಾರಿಗೆ ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿ: ಎಸ್‌ಐಆರ್ ಜಾರಿ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಆಕ್ರೋಶ
ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಗೌರವ ಇದೆ. ಆದರೆ ಖಾದರ್ ಅವರು ತಮ್ಮ ಪೀಠದ ಗೌರವವನ್ನು ಕಾಪಾಡುತ್ತಿಲ್ಲ. ಅವರು ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇದು ಹಲವು ಶಾಸಕರ ಅಭಿಮತವೂ ಹೌದು! ಇದಲ್ಲದೇ ಅವರ ಆಡಳಿತ ಸುಧಾರಣೆ ಹೆಸರಿನಲ್ಲಿ ಮಾಡುತ್ತಿರುವ ಕಾರ್ಯವೈಖರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.
ವಿಧಾನಸೌಧದ ಸಭಾಂಗಣದ ಬಾಗಿಲಿಗೆ ರೋಸ್‌ವುಡ್ ಹಾಕಿದ್ದು, ಹೊಸ ಟಿವಿ ಖರೀದಿ, ಶಾಸಕರ ಮಸಾಜ್ ಛೇರ್, ಗಂಡಬೇರುಂಢ ಗಡಿಯಾರ, ಊಟ ಉಪಹಾರ. ಹೀಗೆ ಹಲವು ವಿಚಾರಗಳು ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡಿವೆ ಎಂದರು.
ಸಭಾಧ್ಯಕ್ಷರ ಭ್ರಷ್ಟಾಚಾರದ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ಪತ್ರ ಮೂಲಕ ತರುತ್ತೇನೆ. ಯು.ಟಿ.ಖಾದರ್ ಈಗ ಲೂಟಿ ಖಾದರ್ ಎಂಬ ಹಂತಕ್ಕೆ ತಲುಪಿದ್ದಾರೆ ಎಂದು ಜನರೇ ಆರೋಪ ಮಾಡುತ್ತಿದ್ದಾರೆ. ಇವೆಲ್ಲದಕ್ಕೂ ಖಾದರ್ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.





