Mysore
23
overcast clouds
Light
Dark

ಪ್ರಜ್ವಲ್‌ ಬಂಧನಕ್ಕೆ ಎಸ್‌ಐಟಿ ಸಿದ್ಧತೆ

ಬೆಂಗಳೂರು: ಲೈಂಗಿಕ ಪ್ರಕರಣ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ತಂಡ ಬೀಡು ಬಿಟ್ಟಿದ್ದು, ಪ್ರಜ್ವಲ್‌ ವಿಮಾನ ಇಳಿಯುತ್ತಿದ್ದಂತೆ ಇಮಿಗ್ರೇಷನ್‌ ವೇಳೆ ಏರ್ಪೋಟ್‌ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.

ನಂತರ ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಲಿದ್ದು, ಬಳಿಕ ಏರ್‌ಪೋರ್ಟ್‌ ಪೊಲೀಸರ ಮೂಲಕ ಎಸ್‌ಐಟಿ ವಶಕ್ಕೆ ಪಡೆಯಲಿದೆ.

ಪ್ರಜ್ವಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಅಲ್ಲಿನ ರೀತಿ ರಿವಾಜು ಮುಗಿಯುವುದಕ್ಕೆ ೩೦ ನಿಮಿಷಕ್ಕಿಂತ ಹೆಚ್ಚು ಸಮಯ ಹಿಡಿಯಲಿದೆ. ಈ ಹಿನ್ನೆಲೆ ವಿಮಾನ ನಿಲ್ದಾಣದ ಟರ್ಮಿನಲ್‌ ಒಳಗೆ ತೆರಳಲು ೧೦ ಎಸ್‌ಐಟಿ ಅಧಿಕಾರಿಗಳಿಗೆ ಪಾಸ್‌ ನೀಡುವಂತೆ ಎಸ್‌ಐಟಿ ಮುಖ್ಯಸ್ಥರು ವಿಮಾನ ನಿಲ್ದಾಣದ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಅದರಂತೆ ವಿಮಾನ ನಿಲ್ದಾಣದ ಪಾಸ್‌ ಪಡೆಯುವಲ್ಲಿ ಎಸ್‌ಐಟಿ ಅಧಿಕಾರಿಗಳು ನಿರತರಾಗಿದ್ದಾರೆ. ಪಾಸ್‌ ಪಡೆದ ಬಳಿಕ ಅಂದರೆ ಇಂದು ರಾತ್ರಿ ೧೦ ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸ್‌ಐಟಿ ಅಧಿಕಾರಿಗಳು ಆಗಮಿಸಲಿದ್ದಾರೆ.

ಪ್ರಜ್ವಲ್‌ ಬಂಧನದ ಬಗ್ಗೆ ಗೃಹ ಸಚಿವರು ಹೇಳಿದಿಷ್ಟು
ಪ್ರಜ್ವಲ್‌ ಬಂಧನದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಮಾತನಾಡಿ, ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಬಂದ ತಕ್ಷಣ ಬಂಧಿಸಲಾಗುವುದು. ಅವರ ಬಂಧನಕ್ಕೆ ಈಗಾಗಲೇ ವಾರೆಂಟ್‌ ಜಾರಿ ಆಗಿದೆ. ಈ ಬಗ್ಗೆ ಎಸ್‌ಐಟಿ  ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.