ನವದೆಹಲಿ: ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಸಿಎಂ ಹುದ್ದೆ ಬಿಟ್ಟು ಕೊಡುತ್ತಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಇಂದು ಮಾತನಾಡಿದ ಅವರು, ಈ ಬಾರಿ ಅತೀ ಹೆಚ್ಚು ಮಳೆಯಾಗಿರುವುದರಿಂದ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಗಳೆಲ್ಲಾ ಹಾಳಾಗಿರುವುದರಿಂದ ಜನರು ಸರಿಯಾಗಿ ಸಂಚಾರ ಮಾಡದೇ ಪರದಾಟ ನಡೆಸುತ್ತಿದ್ದಾರೆ. ಮೊದಲು ಇಂತಹ ವಿಷಯಗಳ ಬಗ್ಗೆ ಗಮನಹರಿಸಬೇಕು. ಇದನ್ನು ಬಿಟ್ಟು ಸಿಎಂ ಬದಲಾವಣೆ ಬಗ್ಗೆ ಪದೇ ಪದೇ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಇದನ್ನು ಓದಿ: ಡಿಕೆಶಿಗೆ ಸಿಎಂ ಹುದ್ದೆ ಹಂಬಲ; ಅದಕ್ಕಿಲ್ಲ ಸಮರ್ಪಕ ಬಲ
ಇನ್ನು ಮುಂದುವರಿದು ಮಾತನಾಡಿದ ಅವರು, ನಮಗಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಬಿಟ್ಟುಕೊಡುತ್ತಾರೆ. ಈ ಬಗ್ಗೆ ಜನರು ಕೂಡ ಮಾತನಾಡುತ್ತಿದ್ದಾರೆ. ಈ ಮಧ್ಯೆ ಹುಸಿಬಾಂಬ್‌ಗಳನ್ನು ಹಾಕಿಕೊಂಡು ರಾಜ್ಯದ ಜನತೆಯನ್ನು ಕತ್ತಲೆ ಕೋಣೆಯಲ್ಲಿ ಇರಿಸುವ ಕೆಲಸ ಬಿಟ್ಟುಬಿಡಿ ಎಂದು ಹರಿಹಾಯ್ದರು.





