Mysore
13
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕಾನೂನು ರೂಪಿಸಲು ಚಿಂತನೆ : ಸಿಎಂ

Siddaramaiah considers enacting a law to control fake news

ಬೆಂಗಳೂರು : ಸುಳ್ಳು ಸುದ್ದಿಗಳ ಮೇಲೆ ನಿಯಂತ್ರಣ, ಪಾವತಿ ಸುದ್ದಿಗಳಿಗೆ ಕಡಿವಾಣ ಸೇರಿದಂತೆ ಹಲವಾರು ವಿಚಾರಗಳಿಗೆ ಸಂಬಂಧಪಟ್ಟಂತೆ ಕಾನೂನು ರೂಪಿಸಲು ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಾರ್ವಜನಿಕ ಸಂಪರ್ಕ ಹಾಗೂ ವಾರ್ತಾ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಪ್ರಜಾಪ್ರಭುತ್ವವಾದಿಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ. ಆದರೆ ಊಹೆಯ ಪತ್ರಿಕೋದ್ಯಮ ಅಪಾಯಕಾರಿ ಎಂದರು.

ಇಂದಿನ ಪತ್ರಿಕಾ ದಿನಾಚರಣೆಯಲ್ಲಿ ನಿಜ ಸುದ್ದಿಗಾಗಿ ಸಮರ ಎಂಬ ವಿಚಾರಗೋಷ್ಠಿ ನಡೆದಿದೆ. ಅದರ ಅರ್ಥ ಪತ್ರಿಕೋದ್ಯಮದಲ್ಲಿ ಸುಳ್ಳು ಸುದ್ದಿ ಬಂದು ಸೇರಿಕೊಂಡಿದೆ ಎಂಬುದನ್ನು ಒಪ್ಪಿಕೊಂಡಂತಲ್ಲವೇ?, ಸುಳ್ಳು ಸುದ್ದಿ ಜಾಸ್ತಿಯಾಗಿವೆ ಎಂದು ಹೇಳಿದರು.

ಪತ್ರಿಕೋದ್ಯಮ ನಾಲ್ಕನೇ ಅಂಗವಿದ್ದಂತೆ. ಇದು ನಿರ್ಭೀತಿ ಮತ್ತು ನಿಸ್ಪಕ್ಷಪಾತವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಪಕ್ಷದ ಪರವಾಗಿ ಕೇಂದ್ರದಲ್ಲಿ ಆಡಳಿತದಲ್ಲಿರುವವರ ಬೆಂಬಲವಾಗಿ ಹೆಚ್ಚಿನ ಓಲೈಕೆಗಳು ಕಂಡುಬರುತ್ತಿವೆ. ಪ್ರಧಾನಿಯಾಗಲೀ, ಮುಖ್ಯಮಂತ್ರಿಯಾಗಲೀ ಯಾರ ಪರವಾಗಿಯೂ ಪತ್ರಿಕೋದ್ಯಮ ನಿಲ್ಲಬಾರದು. ದಲಿತರು, ದಮನಿತರ ಪರವಾದ ನೈಜತೆಗಳನ್ನು ಮುಚ್ಚಿಡದೆ ವಾಸ್ತವಾಂಶಗಳನ್ನು ಜನರ ಮುಂದಿಡಬೇಕು ಎಂದರು.

ಇತ್ತೀಚೆಗೆ ನಡೆದ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮೇಳನದಲ್ಲಿ ತಾವು ಸ್ಪಷ್ಟ ಸೂಚನೆ ನೀಡಿದ್ದು, ಸುಳ್ಳು ಸುದ್ದಿ ಮತ್ತು ದ್ವೇಷಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದೇನೆ ಎಂದರು.

ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರ ವಾಕಿಟಾಕಿ ಸದ್ದು ಮಾಡಿದಾಗ ಏಯ್, ಮೊದಲು ಅದನ್ನು ಬಂದ್ ಮಾಡಯ್ಯ ಎಂದು ಮುಖ್ಯಮಂತ್ರಿ ಹೇಳಿದರು. ನಾವಿಲ್ಲಿ ಗಂಭೀರ ಚರ್ಚೆ ಮಾಡುತ್ತಿದ್ದೇವೆ. ಈ ರೀತಿಯ ಸದ್ದು ಅಡಚಣೆ ಮಾಡುತ್ತದೆ. ವಾಕಿಟಾಕಿಯ ಸೂಚನೆಗಳು ಬೇಕು. ಆದರೆ ಸದ್ದಾಗಬಾರದು ಎಂದು ಮುಖ್ಯಮಂತ್ರಿ ಹೇಳಿದಾಗ ಕಾರ್ಯಕ್ರಮದಲ್ಲಿ ನಗೆಯ ಅಲೆಯುಕ್ಕಿತು.

ನಾನು ಒಂದು ಪಕ್ಷದ ರಾಜಕಾರಣಿಯಾಗಿರಬಹುದು. ಆದರೆ ನಾನು ಹೇಳುವ ಅಂಶಗಳಲ್ಲಿರುವ ಜನ ಸ್ಪಂದನೆಯ ನಿಲುವುಗಳನ್ನು ಅಲ್ಲಗಳೆಯಬಾರದು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತರಾದ ಪಿ.ಸಾಯಿನಾಥ್, ಸಾಹಿತಿ ರೆಹಮತ್ ತರೀಕರೆ, ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯಿಷಾ ಖಾನಂ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಪ್ರಭಾಕರ್, ವಾರ್ತಾ ಇಲಾಖೆಯ ಕಾರ್ಯದರ್ಶಿ ಕಾವೇರಿ, ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:
error: Content is protected !!