Mysore
28
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಮೂಲಸೌಕರ್ಯ ವಂಚಿತ ಹಣ್ಣಿನ ತೋಟ , ಕಾರ್ಯರೂಪಕ್ಕೆ ಬರದ ಸಿದ್ದಾಪುರ  ಜನಪ್ರತಿನಿಧಿಳು

ಮೂಲಸೌಕರ್ಯ ವಂಚಿತ ಹಣ್ಣಿನ ತೋಟ ಹಾಡಿ   ಕೃಷ್ಣ ಸಿದ್ದಾಪುರ ಕಾರ್ಯರೂಪಕ್ಕೆ ಬರದ ಜನಪ್ರತಿನಿಧಿಗಳ ಭರವಸೆ, ರಸ್ತೆ, ಆಶ್ರಯ ಯೋಜನೆ ಮನೆ, ಹಕ್ಕುಪತ್ರ ಒದಗಿಸಲು ಒತ್ತಾಯ

ಸಿದ್ದಾಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದ ಅಂಚಿನ ಕಲ್ಲಳ್ಳ ಗ್ರಾಮದ ಹಣ್ಣಿನತೋಟ ಹಾಡಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗೆ ಯಾವುದೇ ಅಭಿವೃದ್ಧಿ ಯೋಜನೆಗಳು ತಲುಪುತ್ತಿಲ್ಲ ಎಂದು ಕಾಲೋನಿಯ ನಿವಾಸಿಗಳು ಅಳಲು ತೋಡಿಕೊಂಡಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣ್ಣಿನತೋಟ ಹಾಡಿಯಲ್ಲಿ ಮೂಲ ನಿವಾಸಿಗಳು ಶತಮಾನಗಳಿಂದಲೂ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೆ ಬದುಕುತ್ತಿದ್ದಾರೆ. ಜನ ಪ್ರತಿನಿಧಿಗಳು ಇವರಿಗೆ ನೀಡಿದ ಯಾವ ಭರವಸೆಗಳೂ ಅನುಷ್ಠಾನಕ್ಕೆ ಬಂದಿಲ್ಲ. ೧೪ ಎಸ್.ಸಿ., ೧೬ ಎಸ್.ಟಿ. ಸೇರಿದಂತೆ ೩೮ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಪ್ರದೇಶದಲ್ಲಿ ಇಂದಿಗೂ ಮನೆ, ರಸ್ತೆ, ಬೀದಿ ದೀಪ, ಹಕ್ಕು ಪತ್ರ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳು ಗಗನ ಕುಸುಮವಾಗಿವೆ.

ಮೂರು ವರ್ಷಗಳ ಹಿಂದೆ ಕಾಲೋನಿಗೆ ತೆರಳಲು ರಸ್ತೆ ಇಲ್ಲದ ಕಾರಣ ಗ್ರಾಮಸ್ಥರೇ ತಮ್ಮ ತಮ್ಮ ಜಮೀನಿನಲ್ಲಿ ಇರುವ ಕಾಫಿ ಗಿಡಗಳನ್ನು ಕಡಿದು ಸ್ವಂತ ಹಣದಲ್ಲಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ತದನಂತರ ಈ ರಸ್ತೆಗೆ ಅಂದಿನ ಶಾಸಕ ಕೆ.ಜಿ.ಬೋಪಯ್ಯ ೧೦ ಲಕ್ಷ ರೂ.ಅನುದಾನದಲ್ಲಿ ಸೇತುವೆ ಹಾಗೂ ಕಲ್ಲು ಪಿಚ್ಚಿಂಗ್ ಮಾಡಿಸಿದ್ದರು. ಆದರೆ ಹೆಚ್ಚು ಮಳೆಯಿಂದಾಗಿ ರಸ್ತೆಯ ಮಣ್ಣು ಹಾಗೂ ಕಲ್ಲು ಕೊಚ್ಚಿ ಹೋಗಿ ಗುಂಡಿಮಯವಾಗಿದ್ದು, ಇದೀಗ ಈ ರಸ್ತೆ ಯಲ್ಲಿ ಗ್ರಾಮಸ್ಥರು ಹರಸಾಹಸಪಟ್ಟು ಸಂಚರಿಸಬೇಕಾಗಿದೆ. ನಿತ್ಯ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಅಂಗವಿಕಲರು, ಸೇರಿದಂತೆ ಇಲ್ಲಿನ ಕುಟುಂಬಗಳಿಗೆ ಈ ರಸ್ತೆಯೇ ಸಂಪರ್ಕ ಮಾರ್ಗವಾಗಿದ್ದು, ಅರಣ್ಯದಂಚಿನ ಪ್ರದೇಶವಾಗಿರುವುದರಿಂದ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ. ರಸ್ತೆ ಹದಗೆಟ್ಟಿರುವುದರಿಂದ ಬಾಡಿಗೆ ವಾಹನ ಚಾಲಕರು ಬರಲು ಹಿಂದೇಟು ಹಾಕುತ್ತಾರೆ. ತುರ್ತು ಸಂದರ್ಭಗಳಲ್ಲಿ ದುಪ್ಪಟ್ಟು ಬಾಡಿಗೆ ನೀಡಿ ಸಂಚರಿಸಬೇಕಾಗಿದೆ. ಪರಿಶಿಷ್ಟ ಜಾತಿಗಳ ಮುಂದುವರಿದ ಕಾಮಗಾರಿಗಳ ಅನುದಾನದಲ್ಲಿ ಗ್ರಾಮಕ್ಕೆ ಅಗತ್ಯವಾದ ಕಾಮಗಾರಿಗಳನ್ನೂ ಸೇರಿಸಲಾಗಿತ್ತು. ಆದರೆ ಯಾವುದೇ ಕಾಮಗಾರಿಗಳೂ ಈ ಗ್ರಾಮದಲ್ಲಿ ನಡೆದಿಲ್ಲ.

ಇದನ್ನು ಓದಿ : ಪುಟ್ಟಣ್ಣಯ್ಯ ಫೌಂಡೇಶ್‌ನ್‌ನಿಂದ ಉದ್ಯೋಗದ ಭರವಸೆ : ಸಂದರ್ಶನ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಇತ್ತೀಚೆಗೆ ಸಿದ್ದಾಪುರ ಮುಖ್ಯ ರಸ್ತೆಯಿಂದ ಬಿಬಿಟಿಸಿ ಖಾಸಗಿ ತೋಟದ ಮುಖಾಂತರ ಮೈಲಾಪುರ ಗ್ರಾಮಕ್ಕೆ ತೆರಳಲು ಎಸ್.ಸಿ. ಅನುದಾನದ ೨೮ ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಇದು ಹಾಡಿ ರಸ್ತೆಗೆ ಬಂದ ಅನುದಾನವಾಗಿದ್ದು, ಖಾಸಗಿ ವ್ಯಕ್ತಿಗಳ ಪ್ರಭಾವದಿಂದ ಕೈ ತಪ್ಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಲ್ಲಿನ ಬಹುತೇಕ ಕುಟುಂಬಗಳಿಗೆಮನೆ ಇಲ್ಲದೆ ಗುಡಿಸಲಿನಲ್ಲೇ ವಾಸಿಸುತ್ತಿದ್ದಾರೆ. ಹಲವು ವರ್ಷಗಳಿಂದಲೂ ಆಶ್ರಯ ಯೋಜನೆಗೆ ಅರ್ಜಿ ಸಲ್ಲಿಸಿ ದ್ದರೂ ನಮಗೆ ಸೂರು ಕಲ್ಪಿಸಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಮೀಸಲಿಟ್ಟರೂ ಅದು ನೈಜ ಫಲಾನುಭವಿಗಳಿಗೆ ತಲುಪುತ್ತಿಲ್ಲ.

ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶಿಷ್ಟ ಜಾತಿ ಕಾಲೋನಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ಹೋರಾಟ ಕೈಗೊಳ್ಳುವುದಾಗಿ ನಿವಾಸಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶೀನಪ್ಪ, ರಾಜು, ಕಾಂತಪ್ಪ, ಬಾಬು, ರವಿ, ಹರಿ, ರಾಕೇಶ್, ಜೋಯ್, ಶಾಂತ, ಗಿರಿಜಾ, ರಾಧಾ, ಕಮಲ, ಲಲಿತಾ, ಪದ್ಮ, ಅರ್ಪಿತ, ಸೇರಿದಂತೆ ೩೦ಕ್ಕೂ ಹೆಚ್ಚು ಗ್ರಾಮಸ್ಥರು ತಮ್ಮ ಕಾಲೋನಿಯ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ” ಮೂರು ವರ್ಷಗಳ ಹಿಂದೆ ಗ್ರಾಮಕ್ಕೆ ತೆರಳಲು ತಮ್ಮ ತಮ್ಮ ಜಮೀನಿನಲ್ಲಿ ಇರುವ ಕಾಫಿ ಗಿಡಗಳನ್ನು ಕಡಿದು ಸ್ವಂತ ಹಣದಲ್ಲಿ ರಸ್ತೆ ನಿರ್ಮಾಣ ಮಾಡಿ ತದನಂತರ ಅಂದಿನ ಶಾಸಕರಾಗಿದ್ದ ಕೆ.ಜಿ.ಬೋಪಯ್ಯ ಅವರ ೧೦ ಲಕ್ಷ ರೂ.ಅನುದಾನದಲ್ಲಿ ಸೇತುವೆ ಹಾಗೂ ಕಲ್ಲು ಪಿಚ್ಚಿಂಗ್ ಮಾಡಲಾಗಿತ್ತು. ಇದೀಗ ಹೆಚ್ಚಿನ ಮಳೆಯಿಂದಾಗಿ ರಸ್ತೆ ಹದಗೆಟ್ಟಿದ್ದು ಸಂಚರಿಸಲು ಹರಸಹಾಸ ಪಡುವಂತಾಗಿದೆ.

ಮುಂದಿನ ದಿನಗಳಲ್ಲಿ ಈ ರಸ್ತೆಗೆ ಅನುದಾನ ನೀಡಬೇಕು.”  -ರವಿ ಟಿ.ವಿ., ಹಣ್ಣಿನ ತೋಟ ಹಾಡಿ ” ಸರ್ಕಾರ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕೆಲವು ಗ್ರಾಮಗಳಿಗೆ ಈ ಸೌಲಭ್ಯಗಳು ತಲುಪುತ್ತಿಲ್ಲ. ಹೀಗಾಗಿ ಈ ಗ್ರಾಮಗಳು ಅಭಿವೃದ್ಧಿಯಾಗುತ್ತಿಲ್ಲ.”  -ಕಾಂತಪ್ಪ, ಹಣ್ಣಿನತೋಟ ಹಾಡಿ ” ಪರಿಶಿಷ್ಟ ಜನಾಂಗದ ಕುಟುಂಬಗಳೇ ಇಲ್ಲದ ಖಾಸಗಿ ತೋಟದ ಮುಖಾಂತರ ಮೈಲಾಪುರ ಗ್ರಾಮಕ್ಕೆ ತೆರಳಲು ರಸ್ತೆ ನಿರ್ಮಾಣಕ್ಕೆ ೨೮ ಲಕ್ಷ ರೂ. ಎಸ್.ಸಿ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ರಸ್ತೆಯಲ್ಲಿ ಹೆಚ್ಚು ಜನರು ಓಡಾಡುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಮಾಹಿತಿ ಪಡೆದು ಹಣ್ಣಿನ ತೋಟ ಹಾಡಿಯ ಅಭಿವೃದ್ಧಿಗೆ ಅನುದಾನ ನೀಡಬೇಕು”  -ರಾಕೇಶ್, ಹಣ್ಣಿನತೋಟ ಹಾಡಿ ” ಅರಣ್ಯದ ಅಂಚಿನ ಗ್ರಾಮ ಎಂದು ಹಲವು ಮನೆಗಳಿಗೆ ಇಂದಿಗೂ ಹಕ್ಕುಪತ್ರ ಲಭಿಸಿಲ್ಲ. ಮನೆ ನಿರ್ಮಾಣ ಕ್ಕಾಗಿ ಹಲವು ಬಾರಿ ಗ್ರಾ.ಪಂ.ಗೆ ಮನವಿ ನೀಡಿದ್ದರೂ ಪ್ರಯೋಜನವಾಗುತ್ತಿಲ್ಲ. ಸಂಬಂಧಪಟ್ಟವರು ಹಕ್ಕು ಪತ್ರ ನೀಡಬೇಕು, ಮನೆ ನಿರ್ಮಾಣ ಮಾಡಿಕೊಡಬೇಕು.”  -ಮಂಜುಳ, ಹಣ್ಣಿನತೋಟ ಹಾಡಿ

Tags:
error: Content is protected !!