ಬೆಂಗಳೂರು: ಮಲ್ಟಿಪ್ಲೆಕ್ಸ್ ಸೇರಿ ರಾಜ್ಯ ಎಲ್ಲಾ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂ.ಗಳ ಏಕರೂಪ ದರ ನಿಗದಿಪಡಿಸಿದ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ವಾದ – ಪ್ರತಿವಾದ ಆಲಿಸಿ ಮಧ್ಯಂತರ ತಡೆ ನೀಡುವ ಕುರಿತಂತೆ ಮನವಿಯ ವಿಚಾರಣೆ ಪೂರ್ಣಗೊಳಿಸಿ ತನ್ನ ಆದೇಶವನ್ನು ಕಾಯ್ದಿರಿಸಿದ್ದ ಹೈಕೋರ್ಟ್ ನ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025ಕ್ಕೆ ತಡೆ ಕೋರಿರುವ ಮಧ್ಯಂತರ ಕೋರಿಕೆಯನ್ನು ಪುರಸ್ಕರಿಸಲಾಗಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಇದನ್ನು ಓದಿ : ಗೃಹಲಕ್ಷ್ಮೀ ದುಡ್ಡಿನಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಹೊಂಬಾಳೆ ಫಿಲಂನ ವಿಜಯ್ ಕಿರಗಂದೂರು, ಪಿವಿಆರ್ ಐನಾಕ್‍ಸ್ ಲಿಮಿಟೆಡ್, ವಿಕೆ ಫಿಲಂಸ್, ಕೀ ಸ್ಟೋನ್ ಎಂಟರ್‍ಟೇನ್ಮೆಂಟ್ ಪ್ರವೈಟ್ ಲಿಮಿಟೆಡ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಸಲ್ಲಿಸಿದ್ದರು.
ಇನ್ನು ಈ ಹಿಂದೆ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ, ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಿಗೆ ರೂ.200 ನಿಗದಪಡಿಸಿರುವ ಸರ್ಕಾರದ ನಿರ್ಧಾರ ಏಕಪಕ್ಷೀಯ ಮತ್ತು ನಿಯಮ ಹಾಗೂ ಕಾನೂನು ಬಾಹಿರವಾಗಿದೆ. ಸಿನಿಮಾ ಮಂದಿರಗಳನ್ನು ನಿರ್ಮಿಸಲು ಕೋಟ್ಯಂತರ ರೂ. ಹಣ ವ್ಯಯಿಸಲಾಗುತ್ತದೆ. ಕಡಿಮೆ ಸೀಟುಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ, ಸೌಲಭ್ಯ ಒದಗಿಸಿರುವ ಸಂಸ್ಥೆಗಳಿಗೆ ದರ ನಿಗದಿ ಸರಿಯಲ್ಲ ಎಂದು ಆಕ್ಷೇಪಿಸಿದ್ದರು.
ಅಲ್ಲದೇ, ಸರ್ಕಾರದ ನಿರ್ಧಾರ ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. 2017ರಲ್ಲಿಯೂ ಸರ್ಕಾರ ಇದೇ ರೀತಿಯ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ ನಂತರ ಆ ಆದೇಶವನ್ನು ವಾಪಸ್ ಪಡೆದಿತ್ತು. ಟಿಕೆಟ್ ಖರೀದಿಸಿ ಚಿತ್ರ ನೋಡುವುದು ಗ್ರಾಹಕನಿಗೆ ಬಿಟ್ಟದ್ದು. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ವಾದ ಮಂಡಿಸಿದ್ದರು.





