ಮೈಸೂರು : ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಅರಮನೆ ಆವರಣದಲ್ಲಿ ಕಾವಾಡಿಗರಿಗೆ ಮತ್ತು ಮಾವುತರಿಗೆ ವಿಶೇಷ ಉಪಹಾರ ಬಡಿಸಿ ವಿಭಿನ್ನ ರೀತಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ವಿಶ್ವ ವಿಖ್ಯಾತ ಮೈಸೂರಿನಲ್ಲಿ ದಸರಾ ಮಹೋತ್ಸವ ನಡೆಯುತ್ತಿದೆ. ಇಲ್ಲಿನ ಮಾವುತರು ಮತ್ತು ಕಾವಾಡಿಗಳಿಗೆ ಸ್ವತಃ ಶೋಭಾ ಕರಂದ್ಲಾಜೆ ಉಪಾಹಾರ ಬಡಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅರಮನೆ ಆವರಣದಲ್ಲಿ ಉಪಾಹಾರಕ್ಕೆ ವ್ಯವಸ್ಥೆ ಮಾಡಿದ್ದು, ಮಾವುತರು ಮತ್ತು ಕಾವಾಡಿಗಳಿಗಾಗಿ ವಿಶೇಷ ಉಪಾಹಾರ ಸಿದ್ಧಪಡಿಸಲಾಗಿದೆ. ಇಷ್ಟುಮಾತ್ರವಲ್ಲದೇ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಶೋಭಾ ಆಚರಿಸಿಕೊಂಡಿದ್ದು, ಸಚಿವೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳಿಯ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.
ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಬೆನ್ನಲ್ಲೇ ಕೇಂದ್ರ ಗೃಹ ಸಚಿವರಿಂದ ಶೋಭಾ ಕರಂದ್ಲಾಜೆಗೆ ಫೋನ್ ಬಂದಿದೆ. ಹುಟ್ಟುಹಬ್ಬ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶೋಭಾ ಕರಂದ್ಲಾಜೆಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು ಮೈಸೂರಿನಲ್ಲಿ ಶೋಭಾ ಕರಂದ್ಲಾಜೆಗೆ ಸಂಸದ ಪ್ರತಾಪ್ ಸಿಂಹ ವಿಶ್ ಮಾಡಿ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದಾರೆ. ಅಲ್ಲದೇ ರಾಜ್ಯ ರಾಜಕಾರಣಕ್ಕೆ ಆದಷ್ಟು ಬೇಗ ಬನ್ನಿ ಮೇಡಂ. ನಿಮಗೆ ರಾಜ್ಯದಲ್ಲಿ ಒಳ್ಳೆಯ ಹುದ್ದೆ ಸಿಗಲಿ ಎಂದು ಹಾರೈಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರದ್ಲಾಂಜೆ, ನಾನು ಕೇಂದ್ರ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ. ನಾನು ಅಲ್ಲಿಯೇ ಇರುತ್ತೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವೇ ಇಲ್ಲ. ನನಗೆ ಒಳ್ಳೆ ಖಾತೆ ಸಿಕ್ಕಿದೆ. ಅಲ್ಲಿಯೇ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಯಾವ ವರಿಷ್ಠರಿಂದಲೂ ನನಗೆ ಯಾವ ಸೂಚನೆಗಳು ಇಲ್ಲ. ಇವೆಲ್ಲ ಸುದ್ದಿ ಹೇಗೆ ಬರುತ್ತಿವೆಯೂ ನನಗೆ ಗೊತ್ತಿಲ್ಲ. ಮುಂದಿನ ಬಾರಿಯೂ ಮೋದಿ ಪ್ರಧಾನಿಯಾಗಬೇಕು ಎಂಬುದು ನನ್ನ ಇಚ್ಛೆ. ಅದನ್ನೇ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.