ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಗೆ ಅಂಕಿತ ಹಾಕಬಾರದು ಎಂದು ಒತ್ತಾಯಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ.
ದ್ವೇಷ ಭಾಷಣ ನಿಯಂತ್ರಣಕ್ಕೆ ಮಸೂದೆ ತಂದಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ ಮಸೂದೆಯನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಮಸೂದೆಯಲ್ಲಿ ಅನೇಕ ಲೋಪಗಳಿರುವುದು ಗಮನಕ್ಕೆ ಬಂದಿದೆ. ಭಿನ್ನಾಭಿಪ್ರಾಯ ಹತ್ತಿಕ್ಕಲು ಸರ್ಕಾರ ಇದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಸಂವಿಧಾನದ 19ನೇ ವಿಧಿಯ ಅಡಿಯ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ತಿಳಿಸಿದ್ದಾರೆ.
ಆಡಳಿತ, ಸಾಮಾಜಿಜ ನ್ಯಾಯದ ಬಗ್ಗೆ ಧ್ವನಿ ಎತ್ತುವ ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಪರಿಶಿಷ್ಟ ಜಾತಿ ಪಂಗಡ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಗಳನ್ನು ಹತ್ತಿಕ್ಕುವ ಸಾಧ್ಯತೆ ಇದೆ. ಹೀಗಾಗಿ ಮಸೂದೆಯನ್ನು ರಾಷ್ಟ್ರಪತಿ ಪರಿಶೀಲನೆಗೆ ಕಳುಹಿಸಬೇಕು ಎಂದು ಮನವಿ ಮಾಡಿದ್ದಾರೆ.





