Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಕಾನೂನು ಕ್ರಮ ಎದುರಿಸಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು ರಕ್ಷಿಸಲು ಸಚಿವರೆಲ್ಲಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಮೊದಲು ತಜ್ಞರೊಂದಿಗೆ ಚರ್ಚಿಸಿದ ಬಳಿಕವೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.

ಕಾನೂನಿನಡಿ ಎಲ್ಲರೂ ಒಂದೇ. ಯಾರೇ ಆದರೂ ಕಾನೂನು ಎದುರಿಸಬೇಕು. ಹಾಗಾಗಿ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಇನ್ನು ಕಳೆದ 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ಲೋಕಾಯುಕ್ತದಲ್ಲಿದ್ದವು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಲೋಕಾಯುಕ್ತವನ್ನೇ ದುರ್ಬಲ ಮಾಡಿದ್ದರು. ಎಸಿಬಿಗೆ ವರ್ಗಾಯಿಸಿ ಪ್ರಕರಣ ಮುಚ್ಚಿ ಹಾಕಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಒಂದು ವರ್ಷದಲ್ಲೇ ಸಿಎಂ ಸಿದ್ದರಾಮಯ್ಯರ ಮೇಲೆ ಎರಡು ಆರೋಪಗಳಿವೆ. ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿಯ ಭ್ರಷ್ಟಾಚಾರದ ಆರೋಪವಿದೆ.

ಮುಡಾ ಪ್ರಕರಣದಲ್ಲಿ ದಲಿತರ ಜಮೀನನ್ನು ತೆಗೆದುಕೊಂಡಿದ್ದಾರೆ. ಕಾನೂನು ಬಾಹಿರವಾಗಿ ಸಿಎಂ ಪತ್ನಿ ನಿವೇಶನ ಪಡೆದಿದ್ದಾರೆ. ಎಲ್ಲಾ ಕಾಲದಲ್ಲೂ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದ ಸಿದ್ದರಾಮಯ್ಯ ಪ್ರಕರಣವನ್ನು ಮುಚ್ಚಿಹಾಕಲು ದೇಸಾಯಿ ಸಮಿತಿ ರಚಿಸಿದ್ದಾರೆ ಎಂದು ದೂರಿದರು.

Tags: