ಮೈಸೂರು : ಸಮಾಜದಲ್ಲಿ ನಾನಾ ಕಾರಣಗಳಿಂದ ನೊಂದ ಪುರುಷರ ಹಕ್ಕುಗಳ ರಕ್ಷಣೆ ಹಾಗೂ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ‘ಪುರುಷರ ಆಯೋಗ’ ರಚಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಹಿಳೆಯರಂತೆ ಮಹನೀಯರೂ (ಪುರುಷರು) ಸಮಾಜದಲ್ಲಿ ಹಲವು ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಮಹಿಳಾ ಆಯೋಗದಂತೆ ನೊಂದ ಪುರುಷರಿಗೂ ಕಾನೂನುಬದ್ಧ ಸಂಸ್ಥೆ ಅಗತ್ಯವಾಗಿದೆ. ಇದಕ್ಕಾಗಿ ಕಾನೂನಿನಲ್ಲಿ ತಿದ್ದುಪಡಿ ತಂದು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಿಳಾ ಪೊಲೀಸ್ ಠಾಣೆಯಲ್ಲೂ ಪುರುಷರ ಶೋಷಣೆ ನಡೆಯುವುದುಂಟು. ಹೀಗೆ, ನೊಂದವರ ನೆರವಿಗಾಗಿಯೇ ‘ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಟ್ರಸ್ಟ್’ ಸ್ಥಾಪಿಸಲಾಗಿದೆ. ಇದರ ಅಧಿಕೃತ ಉದ್ಘಾಟನೆ ಮಂಡ್ಯದಲ್ಲಿ ಕೆಲವೇ ದಿನಗಳಲ್ಲಿ ನಡೆಯಲಿದೆ. ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾಗುವವರ ಹಿತ ಕಾಯುವ ಪ್ರಮುಖ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.




