ಬೆಳಗಾವಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಯಾವುದೇ ಮುನಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಎಲ್ಲರ ಪಾತ್ರ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಇಂದು(ಜನವರಿ.25) ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ನಾನು ಸಿಎಂ ಆಗುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಆದರೆ ನಾನು ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇನೆ ಅಷ್ಟೇ. ರಾಜ್ಯದಲ್ಲಿ ಸಿಎಂ ಅವರನ್ನು ನೇಮಕ ಮಾಡುವುದು, ಬಿಡುವುದು ಹೈಕಮಾಂಡ್ ಜವಾಬ್ದಾರಿಯಾಗಿದೆ. ಅಲ್ಲದೇ ಈ ರಾಜ್ಯದಲ್ಲಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರಲು ಎಲ್ಲಾ ಸಚಿವರು ಮತ್ತು ಶಾಸಕರ ಪಾತ್ರವಿದೆ. ಅದರಲ್ಲಿ ನಾನು ಭಾಗೀದಾರ ಎಂದರು.
ಡಿ.ಕೆ.ಶಿವಕುಮಾರ್ ಮತ್ತು ನಾನು ಒಗ್ಗಟ್ಟಾಗಿಯೇ ಇದ್ದೇವೆ, ನಮ್ಮ ನಡುವೆ ಯಾವುದೇ ಮುನಿಸಿಲ್ಲ. ನಮ್ಮ ಪಕ್ಷದಿಂದ ಎಲ್ಲರೂ ಸೇರಿಯೇ ಬೆಳಗಾವಿ ಸಮಾವೇಶವನ್ನು ಯಶಸ್ವಿ ಮಾಡಿದ್ದೇವೆ. ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನು ದೆಹಲಿಯಲ್ಲಿ ಕೇಳಬೇಕು. ನನಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡುವಷ್ಟು ಶಕ್ತಿಯಿಲ್ಲ. ಹೀಗಾಗಿ ಈ ಚರ್ಚೆ ಅನಾವಶ್ಯಕ ಎಂದು ಹೇಳಿದರು.
ಶ್ರೀರಾಮುಲು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ
ಇದೇ ಸಂದರ್ಭದಲ್ಲಿ ಶ್ರೀರಾಮುಲು ಅವರ ಬಗ್ಗೆ ಮಾತನಾಡಿದ ಅವರು, ನಮ್ಮ ಪಕ್ಷದ ಸಿದ್ಧಾಂತವನ್ನು ಶ್ರೀರಾಮುಲು ಅವರು ಒಪ್ಪಿ ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇನೆ. ಅವರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂಬುದು ವದಂತಿ ಅಷ್ಟೇ. ಅವರು ಪಕ್ಷಕ್ಕೆ ಬರುವ ವಿಚಾರವಾಗಿ ನನಗೆ ಯಾವುದೇ ವಿರೋಧವಿಲ್ಲ. ಒಂದು ವೇಳೆ ನಾನು ವಿರೋಧ ವ್ಯಕ್ತಪಡಿಸಿದರೆ, ನನ್ನ ವಿರುದ್ಧ ಹೈಕಮಾಂಡ್ ನೋಟಿಸ್ ನೀಡುತ್ತದೆ. ಆಗ ನಾನು ಹೈಕಮಾಂಡ್‌ಗೆ ಉತ್ತರ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಇನ್ನೂ ಡಿ.ಕೆ.ಶಿವಕುಮಾರ್ ಅವರು ಶ್ರೀರಾಮುಲು ಅವರನ್ನು ಸಂಪರ್ಕ ಮಾಡಿರುವುದು ನನಗೆ ತಿಳಿದಿಲ್ಲ. ಹೀಗಾಗಿ ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಕರೆ ತರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.