ಮಂಗಳೂರು: ಡಿಸೆಂಬರ್.9ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಅಧಿವೇಶನವನ್ನು ಒಂದು ದಿನ ಮೊಟಕುಗೊಳಿಸಲಾಗುತ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಳಿಗಾಲದ ಅಧಿವೇಶನವನ್ನು ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರಣಕ್ಕಾಗಿ ಒಂದು ದಿನ ಮೊಟಕುಗೊಳಿಸಲಾಗಿದೆ. ಡಿಸೆಂಬರ್.9ರಿಂದ 19ರವರೆಗೆ ಮಾತ್ರ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.
ಈ ಮೊದಲು ಡಿಸೆಂಬರ್.9ರಿಂದ 20ರವರೆಗೆ ಅಧಿವೇಶನ ನಡೆಸಲು ತೀರ್ಮಾನ ಮಾಡಲಾಗಿತ್ತು. ಆದರೆ ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್.20ರಿಂದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಿಎಂ ಹಾಗೂ ಸಚಿವರು ಪಾಲ್ಗೊಳ್ಳಲು ಅನುಕೂಲ ಮಾಡಿಕೊಡುವಂತೆ ಈ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ವಿಪಕ್ಷಗಳ ಬಗ್ಗೆ ಮಾತನಾಡಿದ ಯು.ಟಿ.ಖಾದರ್ ಅವರು, ನಿಮ್ಮ ರಾಜಕೀಯ ತಿಕ್ಕಾಟ ಏನೇ ಇದ್ದರೂ ಡಿಸೆಂಬರ್.19ರವರೆಗೆ ಕಾಲಾವಕಾಶ ಇದೆ. ಅಧಿವೇಶನ ಮುಗಿದ ನಂತರವೂ ಸಮಯ ಇದೆ. ಆದ್ದರಿಂದ ಸುಗಮ ಕಲಾಪಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.