ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ 500 ಕೋಟಿ ರೂ. ಕಿಕ್ ಬ್ಯಾಕ್ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದು, ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿನ್ನೂ ಇ.ಡಿ. ಅಧಿಕಾರಿಗಳ ತೂಗುಗತ್ತಿಯಲ್ಲಿದ್ದಾರೆ. ಆದರೆ ಇದೀಗ ಅವರ ವಿರುದ್ಧ ಗಣಿ ಗುತ್ತಿಗೆ ನವೀಕರಣ ಹೆಸರಿನಲ್ಲಿ 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದ ಆರೋಪ ಅವರ ವಿರುದ್ಧ ಕೇಳಿಬಂದಿದೆ. ಹೀಗಾಗಿ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಏನಿದೆ?
ಸಿಎಂ ಸಿದ್ದರಾಮಯ್ಯ ಅವರು 2015 ಮುಖ್ಯಮಂತ್ರಿಯಾಗಿದ್ದಾಗ ಗಣಿ ಗುತ್ತಿಗೆ ಹರಾಜು ಹಾಕುವ ಬದಲಿಗೆ ನವೀಕರಣ ಮಾಡಿದ್ದರು. ಗಣಿ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಗಣಿ ಕಂಪೆನಿಗಳ ಲೈಸೆನ್ಸ್‌ಗಳು ಸಾಕಷ್ಟು ವರ್ಷಗಳಿಂದ ಬಾಕಿ ಉಳಿದ್ದವು. ಆ ವೇಳೆ ಅವುಗಳನ್ನು ಸಹ ನವೀಕರಣ ಮಾಡಿದ್ದರು. ಆದರೆ ಗಣಿ ಕಂಪೆನಿಗಳ ಲೈಸೆನ್ಸ್ ಅನ್ನು ನವೀಕರಣ ಮಾಡಿರುವುದಕ್ಕೆ ಸುಮಾರು 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಸಿದ್ದರಾಮಯ್ಯ ಅವರ ಈ ತೀರ್ಮಾನದಿಂದ ಸರ್ಕಾರಕ್ಕೆ ಸುಮಾರು 5,000 ಕೋಟಿ ರೂ. ನಷ್ಟ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯಾವ್ಯಾವ ಕಾಯ್ದೆ ಅಡಿ ಪ್ರಾಸಿಕ್ಯೂಷನ್‌ಗೆ ಮನವಿ
ಸಿಎಂ ಸಿದ್ದರಾಮ್ಯ ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಸೆಕ್ಷನ್ 7,9,11,12 ಹಾಗೂ 15ರ ಅಡಿ ಪ್ರಾಸಿಕ್ಯೂಷನ್‌ಗೆ ಮನವಿ ಮಾಡಲಾಗಿದೆ. ಇನ್ನೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಪ್ರಕಾರ 59, 61, 42, 201, 227, 228, 229, 239, 314, 316 (5) 318 (1), 319, 322, 324 (2), 324 (3), 335, 336, 338, 340 ರ ಪೂರ್ವಾನುಮತಿ ಕೋರಿ ರಾಜ್ಯಪಾಲರ ಬಳಿ ರಾಮಮೂರ್ತಿ ಗೌಡ ಮನವಿ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ರಾಜ್ಯಪಾಲರು ಹೇಳಿರುವುದೇನು?
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದೂರುದಾರರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ದೂರಿನ ಮೇಲೆ ಸಹಿ ಹಾಕಿ ಕಾನೂನು ವಿಭಾಗದ ಅಭಿಪ್ರಾಯಕ್ಕೆ ಕಳುಹಿಸಿದ್ದಾರೆ. ಅಲ್ಲದೇ ದೂರುದಾರ ರಾಮಮೂರ್ತಿ ಗೌಡ ಅವರಿಗೆ ಸಾಲಿಸಿಟರ್ ಜನರಲ್ ಬಳಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ದಾಖಲೆ ಪರಿಶೀಲಿಸಿದ ವರದಿ ನೀಡುವಂತೆ ಸಾಲಿಸಿಟರ್ ಜನರರಲ್ ಅವರರಿಗೆ ಆದೇಶ ನೀಡಿದ್ದಾರೆ.