ತೈಲ ಬೆಲೆ ಏರಿಕೆ; ಸೋಲಿನಿಂದಾಗಿ ಜನರ ಮೇಲೆ ಸೇಡು: ಆರ್.‌ ಅಶೋಕ್‌

ಬೆಂಗಳೂರು: ಕಾಂಗ್ರೆಸ್‌ ಲೋಕಸಭೆ ಚುನಾವಣೆಯಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ರಾಜ್ಯದಲ್ಲಿ ತೈಲ ಬೆಲೆಯನ್ನು ಏರಿಕೆ ಮಾಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದರು.

ಅವರು ಇಂದು(ಜೂ.16) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಎಲ್ಲ ಬಗೆಯ ಬೆಲೆ ಏರಿಕೆಯ ಭಾಗ್ಯಗಳನ್ನು ನೀಡಿದೆ. ಹಾಲಿನ ದರ, ಆಲ್ಕೋಹಾಲ್ ದರ, ಸ್ಟಾಂಪ್ ಡ್ಯೂಟಿ, ಮಾರ್ಗಸೂಚಿ ದರ, ವಿದ್ಯುತ್ ದರ ಹಾಗೂ ಈಗ ತೈಲ ಬೆಲೆ ಏರಿಕೆ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದು ರೂಪಾಯಿ ಬೆಲೆ ಏರಿಕೆಯಾದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಕೂಟರ್ ಶವ ಯಾತ್ರೆ ಮಾಡಿದ್ದರು. 15 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ. ಜನರ ಮೇಲೆ ಸೇಡು ತೀರಿಸಿಕೊಳ್ಳಲು ತೈಲ ದರ ಏರಿಸಿದ್ದಾರೆ ಎಂದು ಹೇಳಿದರು.

ಗ್ಯಾರಂಟಿಗಾಗಿ ₹55,000 ಕೋಟಿ ಮೀಸಲಿಟ್ಟಿರುವುದರಿಂದ ಹಣ ಕೊರತೆಯಾಗಿ ಸಂಬಳ ಕೊಡಲು ದುಡ್ಡಿಲ್ಲ. ಆದ್ದರಿಂದ ಜನರ ಮೇಲೆ 3-4 ಸಾವಿರ ಕೋಟಿ ರೂ‌. ಹೊರೆ ಹಾಕಿ ತೈಲ ದರ ಏರಿಸಲಾಗಿದೆ. ಇದರಿಂದ ಸಹಜವಾಗಿ ತರಕಾರಿ, ಹಾಲು, ಹಣ್ಣು, ಕೊನೆಗೆ ಟೀ ಕಾಫಿಗೂ ದರ ಏರಲಿದೆ. ನಾಳೆಯಿಂದಲೇ ಆಟೊರಿಕ್ಷಾದವರು, ಗೂಡ್ಸ್ ಗಾಡಿಗಳು ದರ ಏರಿಕೆ ಮಾಡುತ್ತಾರೆ. ಜನರು ಮತ ನೀಡಿಲ್ಲ ಎಂಬ ಕಾರಣಕ್ಕೆ ದರ ಏರಿಸಿದೆ. ಹಿಂದೆ ಬಿಜೆಪಿ ಸರ್ಕಾರ 7 ರೂ. ಕಡಿಮೆ ಮಾಡಿತ್ತು. ಕಾಂಗ್ರೆಸ್‌ಗೆ ಮಾನವಿದ್ದರೆ ದರ ಏರಿಕೆ ವಾಪಾಸ್‌ ಪಡೆಯಲಿ ಎಂದು ಆಗ್ರಹಿಸಿದರು.