ಬೆಂಗಳೂರು : ಬೆಂಗಳೂರಿನಲ್ಲಿ ಮಾದಕ ವಸ್ತುಗಳ ತಯಾರಿಕೆಯ ಘಟಕಗಳು ಪತ್ತೆಯಾಗಿರುವುದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿಡಿಮಿಡಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ತೀರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾನುವಾರ ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಗೃಹ ಸಚಿವರು, ನಗರ ಪೊಲೀಸ್ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು ಮತ್ತು ಸಹಾಯಕ ಆಯುಕ್ತರುಗಳ ಜೊತೆ ಹೊಸಚರಣೆಗೆ ಪೂರ್ವಭಾವಿ ಭದ್ರತೆ ಕುರಿತು ಚರ್ಚೆ ನಡೆಸಿದರು.
ಈ ವೇಳೆ ಮಾದಕ ವಸ್ತುಗಳ ವಿಚಾರವಾಗಿ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ ಇದೇ ರೀತಿಯ ಸಿಂಥೇಟಿಕ್ ಡ್ರಗ್ಸ್ ಉತ್ಪಾದನೆಯ ಕಾರ್ಖಾನೆ ಪತ್ತೆಯಾಗಿತ್ತು. ಮುಂದೆ ಇಂತಹ ಘಟನೆಗಳು ಪುನರಾವರ್ತಿಸಬಾರದು ಎಂಬ ಕಟ್ಟಪ್ಪಣೆ ಮಾಡಲಾಗಿತ್ತು. ಹಾಗಿದ್ದರೂ ಬೆಂಗಳೂರಿನಲ್ಲೇ ಮಾದಕ ವಸ್ತುಗಳ ತಯಾರಿಕಾ ಘಟಕಗಳು ಇರುವುದು, ಅದು ಮಹಾರಾಷ್ಟ್ರದ ಪೊಲೀಸರ ಕಾರ್ಯಾಚರಣೆಯಿಂದ ಕಂಡು ಬಂದಿರುವುದು ನಾಚಿಕೆಗೇಟು. ನಮ್ಮ ರಾಜ್ಯದ ಪೊಲೀಸರ ಕಾರ್ಯಕ್ಷಮತೆ ಪ್ರಶ್ನಾರ್ಹವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನು ಓದಿ: ನಾಳೆ ಮೈಸೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಕರ್ನಾಟಕ ಪೊಲೀಸರ ಬಳಿಯು ಗುಪ್ತದಳ ಇದೆ, ಮಾದಕ ದ್ರವ್ಯ ನಿಗ್ರಹ ಪಡೆಯಿದೆ. ಅದಕ್ಕಾಗಿ ಪ್ರತ್ಯೇಕ ಪಡೆಗಳೇ ಕೆಲಸ ಮಾಡುವಾಗ ಡ್ರಗ್ ತಯಾರಿಕೆ ಜಾಲ ಪತ್ತೆಯಾಗದೇ ಇರುವುದು ಯಾವುದೇ ರೀತಿಯಲ್ಲೂ ಸಮರ್ಥನಿಯವಲ್ಲ ಎಂದಿದ್ದಾರೆ.
ಕರ್ನಾಟಕ ರಾಜ್ಯವನ್ನು ಮಾದಕ ವ್ಯಸನ ಮುಕ್ತವಾಗಿಸಬೇಕು ಎಂದು ನಮ್ಮ ಸರ್ಕಾರ ಪಣತೊಟ್ಟಿದೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಬೆಂಬಲ ನೀಡುತ್ತಿದ್ದೇವೆ. ಯಾವುದೇ ಸಂದರ್ಭದಲ್ಲೂ ಪೊಲೀಸರಿಗೆ ಕೈಕಟ್ಟಿ ಹಾಕಿಲ್ಲ. ಹೀಗಿದ್ದರೂ ನೆರೆ ರಾಜ್ಯದ ಪೊಲೀಸರು ಇಲ್ಲಿಗೆ ಬಂದು ಕಾರ್ಯಾಚರಣೆ ನಡೆಸುವುದಾದರೆ ನಾವು ಮೊದಲೇ ಏಕೆ ಮುಂಜಾಗ್ರತೆ ವಹಿಸಲಿಲ್ಲ ಎಂದು ಕಿಡಿಕಾರಿದ್ದಾರೆ.
ಮಾದಕ ವಸ್ತುಗಳನ್ನು ಸಹಿಸಿಕೊಳ್ಳಬಾರದು ಎಂದು ಹಲವು ಬಾರಿ ತಾಕೀತು ಮಾಡಿದ್ದೇವೆ. ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ಆಗಿದ್ದರೂ ಏಕೆ ಇಂತಹ ಕೃತ್ಯಗಳು ನಡೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಮಾದಕ ವಸ್ತುಗಳ, ಸರಬರಾಜು, ಮಾರಾಟ ಮತ್ತು ಬಳಕೆಯೇ ದೊಡ್ಡ ಸವಾಲಾಗಿತ್ತು. ಅಂತಹದ್ದರಲ್ಲಿ ಮಾದಕ ವಸ್ತುಗಳೇ ಇಲ್ಲಿ ತಯಾರಾಗುತ್ತಿವೆ ಎಂದರೆ ನಾಚಿಕೆಗೇಡು. ಇದಕ್ಕೆ ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳನ್ನೆ ಹೊಣೆ ಮಾಡುವುದಾಗಿ ಮೊದಲೇ ಎಚ್ಚರಿಕೆ ನೀಡಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆಯೂ ಪರಿಶೀಲಿಸುವಂತೆ ಗೃಹ ಸಚಿವರು ಸೂಚಿಸಿದ್ದಾರೆ.





