Mysore
18
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್‌ಗೆ ತಿಂಗಳಿಗೊಮ್ಮೆ ಹೊದಿಕೆ, ಬಟ್ಟೆ ನೀಡಲು ಕೋರ್ಟ್ ಆದೇಶ

Darshan

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರಿಗೆ ತಿಂಗಳಿಗೊಮ್ಮೆ ಹೊದಿಕೆ, ಬಟ್ಟೆಗಳನ್ನು ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ಮತ್ತೊಬ್ಬ ಆರೋಪಿ ಪವಿತ್ರಾ ಅವರಿಗೂ ಇದೇ ಆದೇಶ ಅನ್ವಯ ಆಗಲಿದೆ. ಆದರೆ ದರ್ಶನ್ ಕೇಳಿದಂತೆ ಹಾಸಿಗೆ, ದಿಂಬು, ಕನ್ನಡಿ, ಬಾಚಣಿಗೆ ಹಾಗೂ ಇನ್ನಿತರೆ ಸೌಲಭ್ಯಗಳು ಅವರಿಗೆ ಸಿಕ್ಕಿಲ್ಲ.

ಆರೋಪಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ತಮಗೆ ಮಲಗಲು ಹೆಚ್ಚುವರಿ ಹಾಸಿಗೆ ಮತ್ತು ದಿಂಬು ಬೇಕೆಂದು ಮನವಿ ಮಾಡಿದ್ದರು. ಜೈಲಧಿಕಾರಿಗಳು ಹೆಚ್ಚುವರಿ ಹಾಸಿಗೆ-ದಿಂಬು ನೀಡಲು ನಿರಾಕರಿಸಿದ ಕಾರಣ ದರ್ಶನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕೆಲ ದಿನಗಳ ಹಿಂದೆ ನಡೆದ ವಾದದ ಸಮಯದಲ್ಲಿ ನಟ ದರ್ಶನ್ ಪರ ವಕೀಲರು, ಜೈಲಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ದರ್ಶನ್ ಅವರಿಗೆ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ಶೀಟ್ ನೀಡಿಲ್ಲ ಎಂದು ವಾದಿಸಿದ್ದರು. ಅರ್ಜಿಯ ಬಗ್ಗೆ ಹಲವು ಬಾರಿ ವಾದ-ಪ್ರತಿವಾದಗಳು ನಡೆದಿದ್ದವು, ಜೈಲಿಗೆ ಕಾನೂನು ಪ್ರಾಧಿಕಾರ ಸದಸ್ಯರು ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದರು. ವಾದಗಳನ್ನು ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು. ಬುಧವಾರ (ಅ.೨೯) ಆದೇಶ ಹೊರಬಿದ್ದಿದೆ.

ಇದನ್ನೂ ಓದಿ:-ಹಿಂಗಾರು ಹಂಗಾಮಿಗೆ ರಸಗೊಬ್ಬರದ ಕೊರತೆ ಇಲ್ಲ : ಚಲುವರಾಯಸ್ವಾಮಿ

ಈ ಹಿಂದೆ ದರ್ಶನ್ ಹಾಗೂ ಇತರೆ ಆರೋಪಿಗಳ ಜಾಮೀನು ರದ್ದು ಮಾಡಿದ್ದ ಸರ್ವೋಚ್ಚ ನ್ಯಾಯಾಲಯ, ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ವಿಶೇಷ ಸೌಲಭ್ಯ ನೀಡದಂತೆ ಸೂಚಿಸಿತ್ತು. ಅದರಂತೆ ಜೈಲಧಿಕಾರಿಗಳು ದರ್ಶನ್‌ಗೆ ಯಾವುದೇ ಸೌಲಭ್ಯಗಳನ್ನು ನೀಡಿರಲಿಲ್ಲ. ಹಾಗಾಗಿ ದರ್ಶನ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದ ಈಗಿನ ಆದೇಶದಿಂದ ದರ್ಶನ್‌ಗೆ ಪೂರ್ಣ ಸಂತುಷ್ಟಿ ಸಿಕ್ಕಂತಿಲ್ಲ.

ಎ೧ ಪವಿತ್ರಾಗೌಡ, ಎ೨ ದರ್ಶನ್ ಸೇರಿ ೬ ಆರೋಪಿಗಳು ಬುಧವಾರ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಶೀಘ್ರ ಸಾಕ್ಷ್ಯ ವಿಚಾರಣೆ ಕೋರಿ ಪ್ರಾಸಿಕ್ಯೂಷನ್ ಹಾಕಲಾಗಿದ್ದ ಅರ್ಜಿಯ ಬಗ್ಗೆ, ಸಾಕ್ಷ್ಯ ವಿಚಾರಣೆಗೆ ಎರಡೂ ಕಡೆಯವರು ಸಹಕರಿಸುವಂತೆ ನ್ಯಾಯಾಲಯ ಸೂಚನೆ ನೀಡಿತು. ಇದರ ಜೊತೆಗೆ ತಮ್ಮನ್ನು ಆರೋಪದಿಂದ ಕೈಬಿಡುವಂತೆ ಐದನೇ ಆರೋಪಿ ನಂದೀಶ್ ಅರ್ಜಿ ಹಾಕಿದ್ದ, ಆದರೆ ಆ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ಪ್ರತ್ಯೇಕ ಬ್ಯಾರಕ್ ಬೇಡಿಕೆ
ತಮ್ಮನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡುವಂತೆಯೂ ದರ್ಶನ್ ಕೇಳಿಕೊಂಡಿದ್ದರು. ಆದರೆ ಈ ಅಧಿಕಾರವನ್ನು ಜೈಲಧಿಕಾರಿಗಳಿಗೆ ನ್ಯಾಯಾಲಯ ನೀಡಿದೆ. ದರ್ಶನ್ ಅವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವ ನಿರ್ಣಯವನ್ನು ಜೈಲಧಿಕಾರಿಗಳು ಕೈಗೊಳ್ಳಲಿ ಎಂದು ನ್ಯಾಯಾಲಯ ಹೇಳಿದೆ. ದರ್ಶನ್ ಅವರು ಈಗಿರುವ ಬ್ಯಾರಕ್‌ನಲ್ಲಿ ಬೆಳಕು ಬರುವುದಿಲ್ಲ. ಬಿಸಿಲು ಕಾಣದೆ ಫಂಗಸ್ ಆಗಿದೆ ಎಂದು ಆರೋಪಿಸಿದ್ದರು. ಆದರೆ ದರ್ಶನ್ ಭದ್ರತೆ ದೃಷ್ಟಿಯಿಂದ ಬೇರೆ ಬ್ಯಾರಕ್‌ಗೆ ಅವರನ್ನು ಸ್ಥಳಾಂತರ ಮಾಡಿಲ್ಲ ಎಂದು ಜೈಲಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.

Tags:
error: Content is protected !!