Mysore
26
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಬ್ಯಾಲೆಟ್‌ ಪೇಪರ್‌ ಬಳಸಿ ಚುನಾವಣೆ ನಡೆಸಲು ಸಿದ್ದ : ರಾಜ್ಯ ಚುನಾವಣಾ ಆಯುಕ್ತ ಸಂಗ್ರೇಸಿ

ballot paper

ಬೆಂಗಳೂರು : ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ಬದಲಿಗೆ ಮತಪತ್ರ(ಬ್ಯಾಲೆಟ್ ಪೇಪರ್) ಬಳಸಿ ಚುನಾವಣೆ ನಡೆಸಲು ನಾವು ಸಿದ್ದರಿದ್ದೇವೆ ಎಂದು ರಾಜ್ಯ ಚುನಾವಣಾ ಮುಖ್ಯ ಆಯುಕ್ತ ಜಿ.ಎಸ್.ಸಂಗ್ರೇಸಿ ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಇದು ಸ್ಥಳೀಯ ಸಂಸ್ಥೆ ಚುನಾವಣೆಯಾಗಿರುವುದರಿಂದ ಮತದಾರರ ಪಟ್ಟಿಯನ್ನು ನಾವೇ ಸಿದ್ದಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಈಗಿರುವ ನಿಯಮಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದರೆ ಬ್ಯಾಲೆಟ್‍ಪೇಪರ್ ಮೂಲಕವೇ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.

ರಾಜ್ಯ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಹಾಗೂ ಸ್ವಾಯತ್ತ ಸಂಸ್ಥೆ. ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಕಾಯ್ದೆ, ನಿಯಮಗಳಿಗೆ ತಿದ್ದುಪಡಿ ಮಾಡಿದರೆ ಅದರ ಪ್ರಕಾರವೇ ಚುನಾವಣೆ ಮಾಡಬೇಕಾಗುತ್ತದೆ. ನಮ್ಮದೇ ಪ್ರತ್ಯೇಕ ಮತದಾರರ ಪಟ್ಟಿ ಸಿದ್ದಪಡಿಸಲು ಮತ್ತು ಪರಿಷ್ಕರಿಸಲು ಅವಕಾಶ ನೀಡಿದರೆ ನಾವು ಮಾಡುತ್ತೇವೆ ಎಂದರು.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ತಿದ್ದುಪಡಿ ಮಾಡಬೇಕಾದರೆ ಭಾರತೀಯ ಚುನಾವಣಾ ಆಯೋಗ(ಇಸಿಐ) ಅನುಮತಿ ಪಡೆಯಬೇಕಾಗುತ್ತದೆ. ಇದು ಸ್ಥಳೀಯ ಸಂಸ್ಥೆ ಚುನಾವಣೆಯಾಗಿರುವುದರಿಂದ ಹಾಲಿ ಇರುವ ನಿಯಮಗಳಿಗೆ ಕೆಲವೊಂದು ತಿದ್ದುಪಡಿ ಮಾಡಬೇಕಾಗುತ್ತದೆ. ಇದಕ್ಕೆ ಇಸಿಐನ ಅನುಮತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಹಾಲಿ ಇರುವ ಇವಿಎಂಗಳು ತುಂಬ ಹಳೆಯದಾಗಿರುವುದರಿಂದ ಇವುಗಳನ್ನು ವಿಲೇವಾರಿ ಮಾಡಬೇಕೆಂದು ಚುನಾವಣಾ ಆಯೋಗ ಸೂಚನೆ ಕೊಟ್ಟಿದೆ. ಮಹಾನಗರ ಪಾಲಿಕೆ, ನಗರಪಾಲಿಕೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನು ನಾವು ಹೊಸ ಇವಿಎಂಗಳ ಮೂಲಕವೇ ನಡೆಸಬೇಕು. ಅಂತಿಮವಾಗಿ ರಾಜ್ಯ ಸರ್ಕಾರ ಯಾವ ನಿಯಮಗಳನ್ನು ತಿದ್ದುಪಡಿ ಮಾಡಲು ಸೂಚನೆ ನೀಡುತ್ತದೆಯೋ ಅದರ ಮೇಲೆ ಅವಲಂಬಿತವಾಗಿದೆ ಎಂದು ಸಂಗ್ರೇಸಿ ಮಾಹಿತಿ ನೀಡಿದರು.

ಬ್ಯಾಲೆಟ್ ಪೇಪರ್ಗಳನ್ನು ಬಳಸುವುದರಿಂದ ಮತದಾರರಿಗೆ ಯಾವುದೇ ಗೊಂದಲ ಉಂಟಾಗುವುದಿಲ್ಲ. ಈ ಹಿಂದೆ ಇದನ್ನು ಬಳಸಿರುವ ರೂಢಿ ಇರುವ ಕಾರಣ ಸುಲಭವಾಗಿ ಮತದಾನ ನಡೆಯುತ್ತದೆ. ಒಂದಿಷ್ಟು ಮಾನವಶ್ರಮ ಮತ್ತು ಸಂಪನ್ಮೂಲ ಹೊರೆಯಾಗಬಹುದೇ ಹೊರತು ಉಳಿದಂತೆ ಸಮಸ್ಯೆ ಉಂಟಾಗುವುದಿಲ್ಲ ಎಂದು ಅವರು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯ ಚುನಾವಣಾ ಆಯೋಗ ವ್ಯಾಪ್ತಿಯ ಚುನಾವಣೆಗಳಲ್ಲಿ ಮತಪತ್ರವನ್ನು ಬಳಸಲು ಅವಕಾಶವಿದೆ. ಇದಕ್ಕಾಗಿ ಯಾರ ಅನುಮತಿಯು ಅಗತ್ಯವಿಲ್ಲ. ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡಲು ಕಾಯ್ದೆಗೆ ತಿದ್ದುಪಡಿ ತರಬೇಕಿದ್ದು, ಸುಗ್ರೀವಾಜ್ಞೆ ಮೂಲಕ ಅಥವಾ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ ಪಡೆಯಬೇಕಿದೆ. ಇಲ್ಲ ಸಚಿವ ಸಂಪುಟ ಶಿಫಾರಸ್ಸನ್ನ ಚುನಾವಣಾ ಆಯೋಗಕ್ಕೆ ಕಳುಹಿಸಬಹುದು. ಆಗ ಚುನಾವಣಾ ಆಯೋಗ ಒಪ್ಪಬಹುದು ಇಲ್ಲ ಬಿಡಬಹುದು. ಹಾಗಾಗಿ ಕಾಂಗ್ರೆಸ್ ಸರ್ಕಾರದ ಈ ಮಹತ್ವದ ನಿರ್ಧಾರ ಮುಂದಿನ ದಿನಗಳಲ್ಲಿ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

Tags:
error: Content is protected !!