ಬೆಂಗಳೂರು: ಕಾಂಗ್ರೆಸ್ ಸರ್ಕಾರ, ಈಗಿನ ನಕಲಿ ಗಾಂಧಿ ಕುಟುಂಬಕ್ಕಾಗಿ ಮತ್ತು ನಕಲಿ ಗಾಂಧಿಗಳ ಗುಲಾಮಗಿರಿ ಮಾಡಲು ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಾತಂತ್ರ್ಯ ದೊರಕಿತು, ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇಲ್ಲ. ಅದನ್ನು ವಿಸರ್ಜಿಸಿ ಎಂದು ಹೇಳಿದ ಮಹಾತ್ಮ ಗಾಂಧಿಯವರ ಮಾತನ್ನು ಧಿಕ್ಕರಿಸಿದ ನಕಲಿ ಗಾಂಧಿಗಳು. ಇವತ್ತು ಯಾವ ನೈತಿಕತೆಯಿಂದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಿಸುತ್ತಿದ್ದಾರೆ? ಎಂದು ಕಿಡಿಕಾರಿದ್ದಾರೆ.
ಸ್ವಾತಂತ್ರ ಪೂರ್ವದ ಕಾಂಗ್ರೆಸ್ ಅಂದರೆ ಅದು ರಾಜಕೀಯ ಪಕ್ಷವಾಗಿರಲಿಲ್ಲ. ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಹೋರಾಡುತ್ತಿದ್ದ ದೇಶಭಕ್ತರ ಒಕ್ಕೊರಲಿನ ವೇದಿಕೆಯಾಗಿತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ ಮಹಾತ್ಮ ಗಾಂಧೀಜಿ ಅವರ ಮಾತನ್ನು ಧಿಕ್ಕರಿಸಿ, ಕೇವಲ ಅಧಿಕಾರಕ್ಕಾಗಿ, ಕಾಂಗ್ರೆಸ್ ಪಕ್ಷವನ್ನು ಒಂದು ಕುಟುಂಬದ ಆಸ್ತಿ ಮಾಡಿಕೊಂಡ ನಕಲಿ ಗಾಂಧಿಗಳು ಮತ್ತು ಅವರ ಅನುಯಾಯಿಗಳು ಇವತ್ತು ‘ಗಾಂಧಿ ಭಾರತ’ ಹೆಸರಿನಲ್ಲಿ ಐತಿಹಾಸಿಕ ಬೆಳಗಾವಿ ಅಧಿವೇಶನ ಆಚರಿಸುತ್ತಿರುವುದು ವಿಪರ್ಯಾಸ ಎಂದು ವ್ಯಂಗ್ಯವಾಡಿದ್ದಾರೆ.
ಗಾಂಧೀಜಿ ಮಾತ್ರವಲ್ಲ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಹ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದರು. ಕಾಂಗ್ರೆಸ್ ಪಕ್ಷ ಸೇರುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಂಬೇಡ್ಕರರು ದಲಿತರಿಗೆ ಸಲಹೆ ನೀಡಿದ್ದರು ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಅಂತಹ ಮೇರು ನಾಯಕರನ್ನು ಒಳಗೊಂಡಿದ್ದ ಸ್ವಾತಂತ್ಯ ಪೂರ್ವ ಕಾಂಗ್ರೆಸ್‌ಗೂ ಅಧಿಕಾರಕ್ಕಾಗಿ ನಕಲಿ ಗಾಂಧಿಗಳು ನಡೆಸುತ್ತಿರುವ ಈಗಿನ ನಕಲಿ ಕಾಂಗ್ರೆಸ್‌ಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ.
ದೇಶದ ಜನರಿಂದ ಪದೇ ಪದೇ ತಿರಸ್ಕಾರಗೊಳ್ಳುತ್ತಿರುವ ನಕಲಿ ಗಾಂಧಿಗಳನ್ನ ಮತ್ತೊಮ್ಮೆ ರೀಲಾಂಚ್ ಮಾಡಲು ರಾಜ್ಯದ 20 ಕೋಟಿ ರೂಪಾಯಿ ತೆರಿಗೆ ಹಣವನ್ನ ಪೋಲು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನಕಲಿ ಗಾಂಧಿಗಳ ಗುಲಾಮಗಿರಿ ಮಾಡಲು ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.