Mysore
34
scattered clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಶಿಷ್ಟಾಚಾರ ಪಾಲನೆಯಲ್ಲೂ ರಾಜ್ಯ ಸರ್ಕಾರ ಕೀಳು ರಾಜಕೀಯ ಮಾಡುತ್ತಿದೆ: ಆರ್.ಅಶೋಕ್‌

ಬೆಂಗಳೂರು: ರಾಜ್ಯ ಸರ್ಕಾರ ಶಿಷ್ಟಾಚಾರದಲ್ಲಿ ಒಂದು ಕಡೆ ಕೀಳು ರಾಜಕೀಯ ಮಾಡುತ್ತಿದ್ದರೆ, ಮತ್ತೊಂದು ಕಡೆ ಹೂಡಿಕೆದಾರರ ಸಮಾವೇಶಕ್ಕೆ ಪ್ರವೇಶಾತಿ ಶುಲ್ಕ ವಿಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಎಷ್ಟು ಪಾಪರ್ ಆಗಿದೆ ಎಂದು ಮತ್ತೊಮ್ಮೆ ಪ್ರದರ್ಶನ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಇಂದು(ಫೆಬ್ರವರಿ.11) ಸಂಜೆ ಉದ್ಘಾಟನೆ ಆಗಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಬಗ್ಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಇಂದಿನ ಎಲ್ಲಾ ದಿನಪತ್ರಿಕೆಗಳಲ್ಲೂ ಫುಲ್ ಪೇಜ್ ಜಾಹೀರಾತು ನೀಡಿದೆ. ಸಮಾವೇಶಕ್ಕೆ ನಮ್ಮ ಶುಭ ಹಾರೈಕೆಗಳು. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲಿ, ಕಳೆದ 20 ತಿಂಗಳುಗಳಿಂದ ಸಂಪೂರ್ಣವಾಗಿ ಸ್ಥಬ್ಧವಾಗಿರುವ ರಾಜ್ಯದ ಅಭಿವೃದ್ಧಿಗೆ ಇನ್ನು ಮುಂದೆಯಾದರೂ ಚುರುಕು ಸಿಗಬೇಕೆಂದು
ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಹೂಡಿಕೆದಾರರ ಸಮಾವೇಶದ ಉದ್ಘಾಟನೆ ನೆರವೇರಿಸಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಫೋಟೋ ಜಾಹೀರಾತಿನಲ್ಲಿ ಯಾಕಿಲ್ಲ? ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಲಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಫೋಟೋ ಯಾಕೆ ಹಾಕಿಲ್ಲ? ಕೇವಲ ಸಿಎಂ, ಡಿಸಿಎಂ ಹಾಗು ಕೈಗಾರಿಕಾ ಸಚಿವರ ಫೋಟೋ ಹಾಕಲು ಹೂಡಿಕೆದಾರರ ಸಮಾವೇಶ ರಾಜಕೀಯ ಕಾಂಗ್ರೆಸ್ ಪಕ್ಷದ ರಾಜಕೀಯ ಸಮಾವೇಶವಲ್ಲ. ಇಂತಹ ಜಾಗತಿಕ ಸಮಾವೇಶದ ಜಾಹೀರಾತಿನಲ್ಲೂ ಕ್ಷುಲ್ಲಕ ರಾಜಕೀಯ ಮಾಡುವ ಕಾಂಗ್ರೆಸ್‌ ಪಕ್ಷಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ ಎಂದು ಭಾಷಣ ಬಿಗಿಯುವ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಪ್ರಥಮ ಪ್ರಜೆಯಾಗಿರುವ ರಾಜ್ಯಪಾಲರ ಫೋಟೋ ಹಾಕುವ ಕನಿಷ್ಠ ಶಿಷ್ಟಾಚಾರವನ್ನೂ ಪಾಲನೆ ಮಾಡುವ ಸೌಜನ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ನವೋದ್ಯಮ ಪ್ರಾರಂಭಿಸಬೇಕು ಎಂಬ ಉತ್ಸಾಹದಲ್ಲಿರುವ ಯುವಕ, ಯುವತಿಯರಿಗೆ, ವೃತ್ತಿಪರರಿಗೆ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಒಂದು ಉತ್ತಮ ಕಲಿಕಾ ಅವಕಾಶವೂ ಹೌದು, ತಮ್ಮ ಕಾರ್ಯ ಕ್ಷೇತ್ರದಲ್ಲಿರುವ ಇತರರನ್ನು ಸಂಪರ್ಕ ಮಾಡಿ ನೆಟ್‌ ವರ್ಕಿಂಗ್‌ ಮಾಡಿಕೊಳ್ಳುವ ವೇದಿಕೆಯೂ ಹೌದು. ಆದರೆ ಹೂಡಿಕೆದಾರರ ಸಮಾವೇಶಕ್ಕೆ ಪ್ರವೇಶ ಶುಲ್ಕ ವಿಧಿಸುವ ಮೂಲಕ ಇವರೆಲ್ಲರಿಗೂ ಸಮಾವೇಶದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಈ ದರಿದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ರಾಜ್ಯದ ಯುವ ಜನಾಂಗಕ್ಕೆ ಈ ಹೂಡಿಕೆದಾರರ ಸಮಾವೇಶದಲ್ಲಿ ಪ್ರವೇಶ ಇಲ್ಲದ ಮೇಲೆ ಈ ಸಮಾವೇಶ ಮಾಡುತ್ತಿರುವುದಾದರೂ ಯಾರಿಗೋಸ್ಕರ? ಮೂರು ದಿನ ಫೋಟೋ ಶೂಟ್ ಮಾಡಿಸಿಕೊಂಡು ಪುಕ್ಕಟೆ ಪ್ರಚಾರ ಪಡೆಯೋದಕ್ಕಾ? ಅಥವಾ ಗ್ಯಾರೆಂಟಿಗಳಿಂದ ದಿವಾಳಿ ಆಗಿರುವ ಸರ್ಕಾರದ ಬೊಕ್ಕಸವನ್ನು ಪ್ರವೇಶ ಶುಲ್ಕ ಮೂಲಕ ವಸೂಲಿ ಮಾಡುವುದಕ್ಕಾ? ಎಂದು ಪ್ರಶ್ನಿಸಿದ್ದಾರೆ.

Tags: