Mysore
21
few clouds

Social Media

ಶನಿವಾರ, 24 ಜನವರಿ 2026
Light
Dark

ಕುರ್ಚಿ ಬಡಿದಾಟ ಬದಿಗೊತ್ತಿ, ಕಬ್ಬು ಬೆಳೆಗಾರದ ಸಮಸ್ಯೆ ಬಗೆಹರಿಸಿ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಕುರ್ಚಿ ಬಡಿದಾಟವನ್ನು ಬದಿಗೊತ್ತಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಮುಂದಾಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಅನೇಕ ಸಚಿವರು ಕುರ್ಚಿ ಕಿತ್ತಾಟ, ಬಣ ಬಡಿದಾಟ, ನವೆಂಬರ್ ಕ್ರಾಂತಿಯಲ್ಲೇ ಮುಳುಗಿದ್ದಾರೆ. ಅನ್ನದಾತರ ಸಮಸ್ಯೆಗಳನ್ನು ಕೇಳುವವರು ಯಾರು? ಎಂದು ಪ್ರಶ್ನೆ ಮಾಡಿದರು.

ನಿಮ್ಮ ಕುರ್ಚಿ ಉಳಿಯುತ್ತದೆಯೋ ಬಿಡುತ್ತದೆಯೋ ಅಥವಾ ನವೆಂಬರ್‌ನಲ್ಲಿ ಕ್ರಾಂತಿಯಾಗುತ್ತದೆಯೋ? ಅದು ಜನತೆಗೆ ಬೇಡವಾದ ವಿಷಯ. ಮೊದಲು ಬೆಳಗಾವಿ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸಿ, ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿದರು.

ಇದನ್ನು ಓದಿ: ತೆಲಂಗಾಣದಲ್ಲಿ ರಸ್ತೆ ಅಪಘಾತ ಪ್ರಕರಣ: ಸಾವಿನ ಸಂಖ್ಯೆ 24ಕ್ಕೆ ಏರಿಕೆ

ನಾನು ಸಿಎಂ ಮತ್ತು ಡಿಸಿಎಂಗೆ ಮನವಿ ಮಾಡುವುದೇನೆಂದರೆ, ನಿಮ್ಮ ಕಿತ್ತಾಟದಲ್ಲಿ ರೈತರು ಬೀದಿಗೆ ಬೀಳುವುದು ಬೇಡ. ಕ್ರಾಂತಿಯಾದರೂ ಆಗಲಿ ಮೊದಲು ಅನ್ನದಾತರ ಸಮಸ್ಯೆಯನ್ನು ಪರಿಹರಿಸಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದರೂ ಸರ್ಕಾರ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಬರೀ ಕೇಂದ್ರವನ್ನು ದೂಷಿಸುತ್ತಲೇ ಕಾಲ ಕಳೆಯುತ್ತಿದೆ. ಸಮಸ್ಯೆ ಹಾಗೂ ರೈತರಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿಲ್ಲ. ರಾಜ್ಯದ ಕೆಲವು ಕಡೆ ಕಬ್ಬು ಬೆಳೆಗಾರರ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರ ಅಥವಾ ಸಚಿವರಾಗಲಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಒಟ್ಟಾರೆ ಈ ನಾಡಿನ ರೈತರ ಮತ್ತು ಸಮಸ್ಯೆಗಳ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Tags:
error: Content is protected !!