ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ಆಗಸ್ಟ್ 1ರೊಳಗೆ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿಯನ್ನು ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಹಾಗೂ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಆ.1ರೊಳಗೆ ಒಳಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಮುಂದಿನ ತಿಂಗಳ ಆಗಸ್ಟ್.1ರೊಳಗೆ ಎಸ್ಸಿ ಒಳಮೀಸಲಾತಿ ಜಾರಿ ಮಾಡಬೇಕು. ನ್ಯಾಯಾಲಯವು ಈಗಾಗಲೇ ಸ್ಪಷ್ಟ ಆದೇಶ ನೀಡಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಇನ್ನು ನಮ್ಮ ಸಮುದಾಯದ ಸಹನೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ಕೊಟ್ಟರು.
ಆಗಸ್ಟ್.1ರ ತನಕ ನಾವು ಕಾಯುತ್ತೇವೆ. ಅಷ್ಟರೊಳಗೆ ಸರ್ಕಾರ ಎಲ್ಲವನ್ನು ಸರಿಪಡಿಸಿ ಜಾರಿ ಮಾಡದಿದ್ದರೆ ಆ.16ರಿಂದ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಅಸಹಕಾರ ಹೋರಾಟ ಮಾಡುತ್ತೇವೆ. ತಾಲ್ಲೂಕು ಕಚೇರಿಗಳಿಗೆ ಬೀಗ ಹಾಕುವ ಚಳುವಳಿ ಮಾಡುತ್ತೇವೆ ಎಂದು ಗುಡುಗಿದರು.





