ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡಿಲ್ಲ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಜನರು ಗಂಜಿ ಕೇಂದ್ರದಲ್ಲಿರುತ್ತಾರೆ. ಆಗ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ, 2013-2014 ರ ಜುಲೈನಲ್ಲಿ 9 ತಿಂಗಳಾದ ನಂತರ, 2014-15 ರಲ್ಲಿ 8 ತಿಂಗಳ ನಂತರ, 2015-16ರಲ್ಲಿ 7 ತಿಂಗಳ ನಂತರ ಪರಿಹಾರ ನೀಡಲಾಗಿದೆ. ನಮ್ಮ ಬಿಜೆಪಿ ಸರ್ಕಾರದಲ್ಲಿ 2019-20 ರ ಆಗಸ್ಟ್ ಪ್ರವಾಹದ ನಂತರ ಎರಡೇ ತಿಂಗಳಲ್ಲಿ ಪ್ರವಾಹ ನೀಡಲಾಗಿದೆ. 2022ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2021-22 ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2023ರ ಪ್ರವಾಹದಲ್ಲಿ ಒಂದೇ ತಿಂಗಳಲ್ಲಿ ಪ್ರವಾಹ ನೀಡಲಾಗಿತ್ತು. ಇಷ್ಟು ವಿಳಂಬ ಮಾಡಿ ಪರಿಹಾರ ನೀಡಬಾರದು ಎಂದರು.
ಇದನ್ನು ಓದಿ: ಕೇಂದ್ರ ಸರ್ಕಾರ, ಇಂಡಿಗೋ ವಿರುದ್ಧ ಹೈಕೋರ್ಟ್ ಆಕ್ರೋಶ
ಎನ್‌ಡಿಆರ್‌ಎಫ್ ನಿಯಮ ಪ್ರಕಾರ ಮನೆ ಹಾನಿಗೆ 95,000 ರೂ. ನೀಡಲಾಗುತ್ತದೆ. ಬಿಜೆಪಿ ರಾಜ್ಯ ಸರ್ಕಾರದಿಂದ ನಾಲ್ಕು ಲಕ್ಷ ಸೇರಿಸಿ ಒಟ್ಟು 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕದಲ್ಲಿ ಮನೆ ಹಾನಿಗೆ ಈ ರೀತಿ ಪರಿಹಾರ ನೀಡದೆ, ಕೇಂದ್ರದ ಪಾಲನ್ನು ಮಾತ್ರ ನೀಡುತ್ತಿದೆ. ಕೇವಲ 95,000 ರೂ ನಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದಿಂದ 6,651.15 ಕೋಟಿ ರೂ. ಬೆಳೆ ಹಾನಿ ಪರಿಹಾರವನ್ನು 51.95 ಲಕ್ಷ ರೈತರ ಬ್ಯಾಂಕ್ ಖಾತೆಗೆ ಹಾಕಲಾಗಿತ್ತು. ಕಾಂಗ್ರೆಸ್ ಸರ್ಕಾರ ಡಿಬಿಟಿ ಬದಲು ಫ್ರೂಟ್ ತಂತ್ರಾಂಶ ತಂದು ನಾಲ್ಕು ತಿಂಗಳು ವಿಳಂಬ ಮಾಡಿದೆ. ಈಗ ಪರಿಹಾರ ನೀಡಲು ತಡವಾಗುತ್ತಿದೆ ಎಂದರು.
2014-2022 ರವರೆಗೆ ನರೇಂದ್ರ ಮೋದಿ ಸರ್ಕಾರ 11,603 ಕೋಟಿ ರೂ. ಪರಿಹಾರ ನೀಡಿದ್ದರೆ, ಮನಮೋಹನ್ ಸಿಂಗ್ ಸರ್ಕಾರ 3,233 ಕೋಟಿ ರೂ. ನೀಡಿತ್ತು. ಅಂದ್ರೆ ನಾಲ್ಕು ಪಟ್ಟು ಅಧಿಕಾರ ಪರಿಹಾರ ದೊರೆತಿದೆ. ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ನೀಡಲಿ ಎಂದು ಕೇಳಿರಲಿಲ್ಲ. ರಾಜ್ಯದ ಖಜಾನೆಯಿಂದಲೇ ಮೊದಲು ಹಣ ನೀಡಲಾಗಿತ್ತು. ಕೇಂದ್ರ ಸರ್ಕಾರಕ್ಕಾಗಿ ಕಾಯಬಾರದು ಎಂಬುದು ನನ್ನ ಅಭಿಪ್ರಾಯ. ಅದೇ ರೀತಿ ಈಗಲೂ ಕಾಂಗ್ರೆಸ್ ಸರ್ಕಾರ ಖಜಾನೆಯಿಂದ ಹಣ ತೆಗೆದು ನೀಡಲಿ ಎಂದು ಆಗ್ರಹಿಸಿದರು.
ಒಬ್ಬ ರಾಜ ಒಂದು ಹೆಜ್ಜೆ ಮುಂದೆ ಇಟ್ಟರೆ ಸೈನಿಕರು ಎರಡು ಹೆಜ್ಜೆ ಮುಂದಿಡುತ್ತಾರೆ. ಆದರೆ ಇಲ್ಲಿ ನಾಯಕತ್ವವೇ ಇಲ್ಲ. ಒಬ್ಬ ಶಾಸಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಇಲ್ಲಿ ನಾಯಕತ್ವದ ಬಗ್ಗೆ ಗೊಂದಲವಿದೆ. ಕೆಲವು ಶಾಸಕರು ಡಿ.ಕೆ.ಶಿವಕುಮಾರ್ ಪರವಾಗಿ ಹೇಳಿದರೆ, ಮತ್ತೊಬ್ಬ ಶಾಸಕರು ಡಿಕೆಶಿಗೆ ಕೂಲಿ ಕೊಡಿ ಎಂದು ಕೇಳುತ್ತಾರೆ. ಇಡ್ಲಿ ವಡೆ ತಿಂದರೆ ಸಮಸ್ಯೆ ಬಗೆಹರಿಯಲ್ಲ. ಹಾದಿ ಬೀದಿಯಲ್ಲಿ ನಾನೇ ಸಿಎಂ ಎಂದು ಹೇಳುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವುದಿಲ್ಲ. ಸರಿಯಾಗಿ ಕುಳಿತು ಯಾರು ಸಿಎಂ ಎಂದು ತೀರ್ಮಾನಿಸಿ ಎಂದರು.





