ಕಲಬುರ್ಗಿ: ಬೆಂಗಳೂರು ಕಾಲ್ತುಳಿತ ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಸರ್ಕಾರದ ಲೋಪದೋಷವಾಗಿದ್ದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಕಲಬುರ್ಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭದ್ರತೆಯ ದೃಷ್ಟಿಯಿಂದ ಸರ್ಕಾರ ವಿಕ್ಟರಿ ಪೆರೇಡ್‌ಗೆ ನಿರಾಕರಣೆ ಮಾಡಿತ್ತು. ಆದರೆ, ಬಿಜೆಪಿಯವರು ಇದಕ್ಕೆ ತಕರಾರು ತೆಗೆದು ಟ್ವೀಟ್ ಮಾಡಿ, ನಂತರ ಡಿಲೀಟ್ ಮಾಡಿದ್ದಾರೆ. ಈಗ ಘಟನೆ ನಡೆದು ಹೋಗಿದೆ. ಎಲ್ಲದರಲ್ಲೂ ರಾಜಕೀಯ ಮಾಡಬಾರದು, ಇದು ಸಮಯವಲ್ಲ. ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿಲ್ಲ. ಸಾವಿಗೀಡಾದವರ ಮನೆಯವರಿಗೆ ಸಾಂತ್ವನ ಹೇಳಿದೆ. ಪರಿಹಾರ ಕೂಡಾ ಘೋಷಿಸಿದೆ. ಘಟನೆ ಕುರಿತಂತೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದರು.
ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಘಟನೆಗಳಿಗೂ ಒಂದೇ ಮಾನದಂಡ ಅನ್ವಯ ಆಗಬೇಕು. ಪಹಲ್ಗಾಮ್‌ನಲ್ಲಿ ಉಗ್ರರು ಜನರನ್ನು ಹತ್ಯೆ ಮಾಡಿ ಹೋಗಿದ್ದಾರೆ. ಅವರು ಎಲ್ಲಿ ಹೋಗಿದ್ದಾರೆ. ಭಾರತದ ಒಳಗೆ ಇದ್ದಾರ ಅಥವಾ ಪಾಕಿಸ್ತಾನಕ್ಕೆ ಹೋಗಿದ್ದಾರ ಎನ್ನುವ ಮಾಹಿತಿ ಇಲ್ಲ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರ, ವಿದೇಶಾಂಗ ಸಚಿವರ ರಾಜೀನಾಮೆಗೆ ಯಾರಾದರೂ ಒತ್ತಾಯಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.





