ಬೆಂಗಳೂರು : ಬಾಲಗಂಗಾಧರನಾಥ ಶ್ರೀಗಳ ಧಾರ್ಮಿಕ ಗದ್ದುಗೆ ಲೋಕಾರ್ಪಣೆ ಹಾಗೂ ಡಾ.ನಿರ್ಮಲಾನಂದನಾಥ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಫೆ.23ಕ್ಕೆ ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಭೇಟಿ ನೀಡಲಿದ್ದಾರೆ.
ಕಳೆದ ನವಂಬರ್ ತಿಂಗಳಿನಲ್ಲಿ ಉಡುಪಿಗೆ ಬಂದ ಬೆನ್ನಲ್ಲೇ, ಇದೀಗ ಮೋದಿ ಅವರು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿಗೆ ಭೇಟಿ ನೀಡಿ, ನಿರ್ಮಾಲನಂದಾನಾಥ ಶ್ರೀಗಳ ಪಟ್ಟಾಭಿಷೇಕ ಹಾಗೂ ಬಾಲಗಂಗಾಧರನಾಥ ಶ್ರೀಗಳ ಐಕ್ಯ ಸ್ಥಳ ಮತ್ತು ಸೇವಾ ಕಾರ್ಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಶ್ರೀಕ್ಷೇತ್ರ ಆದಿಚುಂಚನಗಿರಿ ಹಾಗೂ ಧಾರ್ಮಿಕ ವಿಚಾರವಾಗಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಚುಂಚನಗಿರಿ ಶ್ರೀಗಳು ಮೋದಿ ಪ್ರವಾಸದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿರುವ ಪ್ರಧಾನಿ ಮೋದಿ ಅವರು ಆ ನಂತರ ವಿಶೇಷ ವಿಮಾನದ ಮೂಲಕ ಆದಿ ಚುಂಚನಗಿರಿ ವಿಶ್ವ ವಿದ್ಯಾಲಯ ಆವರಣದ ಹೆಲಿಪ್ಯಾಡ್ ಗೆ ಬಂದಿಳಿಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಳೆದ ನವೆಂಬರ್ 28ರಂದು ಕೃಷ್ಣನೂರು ಉಡುಪಿ ಭೇಟಿ ನೀಡಿದ್ದರು. ಮಂಗಳೂರಿಗೆ ವಿಮಾನದ ಮೂಲಕ ಬಂದಿಳಿದ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಿದ್ದರು.
ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಮೋದಿ, ಸ್ವರ್ಣ ಲೇಪಿತ ಕನಕನ ಕಿಂಡಿ ಉದ್ಘಾಟಿಸಿ, ಅದರ ಮೂಲಕ ಕಡೆಗೋಲು ಕೃಷ್ಣನ ದರ್ಶನ ಪಡೆದಿದ್ದರು. ಬಳಿಕ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ‘ಭಾರತ ಭಾಗ್ಯವಿಧಾತ’ ಅಂತ ಬಿರುದು ನೀಡಿ, ಮೋದಿಯವರನ್ನು ಗೌರವಿಸಿದ್ದರು. ಇದಕ್ಕೂ ಮುನ್ನ ಉಡುಪಿಯಲ್ಲಿ ಮೋದಿ ಭರ್ಜರಿ ರೋಡ್ ಶೋ ಮಾಡಿದ್ದರು. ಬಳಿಕ ಉಡುಪಿ ಮಠದಲ್ಲಿ ನಡೆಯುತ್ತಿದ್ದ ಲಕ್ಷ ಗೀತಾ ಕಂಠ ಗೀತಾರಾಧನೆಯಲ್ಲಿ ಪ್ರಧಾನ ಮೋದಿ ಅವರು ಭಾಗವಹಿಸಿದ್ದರು. ಸಾವಿರಾರು ಭಕ್ತರ ಜೊತೆ ಪ್ರಧಾನಿ ಮೋದಿ ಭಾವಪೂರ್ಣವಾಗಿ ಗೀತಾ ಪಠಣದೊಂದಿಗೆ ತೊಡಗಿಸಿಕೊಂಡಿದ್ದರು.





