Mysore
18
few clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಕಾರವಾರದ ಕದಂಬ ನೌಕನೆಲೆಗೆ ರಾಷ್ಟ್ರಪತಿ ಭೇಟಿ ನಾಳೆ

ಬೆಂಗಳೂರು‌ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ನೌಕಾನೆಲೆ ಐಎನ್ ಎಸ್ ಸ್ ಕದಂಬ (ಪ್ರಾಜೆಕ್ಟ್ ಸೀಬರ್ಡ್) ಗೆ ಅಧಿಕೃತ ಭೇಟಿ ನೀಡಲಿದ್ದಾರೆ.

ಈ ವೇಳೆ ಅವರು,ಜಲಾಂತರ್ಗಾಮಿ ಯುದ್ಧನೌಕೆಯೊಳಗೆ ಸಮುದ್ರದಲ್ಲಿ ಸಂಚರಿಸುವರು. ಈ ಮೂಲಕ, ಮುರ್ಮು ಅವರು ಜಲಾಂತ ರ್ಗಾಮಿಯಲ್ಲಿ ಸಾಗಲಿರುವ ಮೊದಲ ಮಹಿಳಾ ರಾಷ್ಟ್ರಪತಿ ಎನ್ನಿಸಿಕೊಳ್ಳಲಿದ್ದಾರೆ.

ಇಂದು ಸಂಜೆ ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಗೋವಾ ರಾಜಧಾನಿ ಪಣಜಿಗೆ ಆಗಮಿಸಿದ ಅವರು, ಇಲ್ಲಿನ ಲೋಕಭವನದಲ್ಲಿ ವಾಸ್ತವ್ಯ ಹೂಡಿದರು. ಬೆಳಿಗ್ಗೆ ಭಾರತೀಯ ವಾಯುಪಡೆಗೆ ( ಐಎಎಪ್) ಸೇರಿದ ವಿಶೇಷ ಹೆಲಿಕಾಪ್ಟರ್ ಮೂಲಕ ಕಾರವಾರಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ ಸುಮಾರು 10 ಗಂಟೆಗೆ ನೌಕಾನೆಲೆಗೆ ಪ್ರವೇಶಿಸಲಿರುವ ಅವರು, ನೌಕಾಪಡೆಯ ಹಿರಿಯ ಅಧಿಕಾರಿಗಳಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ.

ಈ ಐತಿಹಾಸಿಕ ಭೇಟಿಯ ಹಿನ್ನೆಲೆಯಲ್ಲಿ ನೌಕಾನೆಲೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ನೌಕಾಪಡೆ ಸಂಪೂರ್ಣ ಸಿದ್ಧತೆ ನಡೆಸಿದೆ. ದೇಶದ ಮೊದಲ ಸ್ವದೇಶಿ ವಿಮಾನ ಯುದ್ಧನೌಕೆ ಐಎನ್ ಎಸ್ ವಿಕ್ರಾಂತ್ ಗೆ ರಾಷ್ಟ್ರಪತಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಯುದ್ಧನೌಕೆಯ ತಂತ್ರಜ್ಞಾನ, ಕಾರ್ಯವಿಧಾನ, ವಾಯುಪಡೆ-ನೌಕಾಪಡೆ ಸಂಯುಕ್ತ ಕಾರ್ಯಾಚರಣೆಗಳ ಕುರಿತು ವಿವರಗಳನ್ನು ಪಡೆಯಲಿದ್ದಾರೆ. ನೌಕೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.

ಇದನ್ನು ಓದಿ: ಲೋಕ್ ಅದಾಲತ್‌ನಲ್ಲಿ 14,850 ಪ್ರಕರಣ ಇತ್ಯರ್ಥ : ಒಂದಾದ ಕೌಟುಂಬಿಕ ಕಲಹದಿಂದ ಬೇರ್ಪಟ್ಟಿದ್ದ 6 ದಂಪತಿಗಳು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಲಂತರ್ಗಾಮಿ ನೌಕೆಗೆ ಭೇಟಿ ನೀಡಿ, ಸಮುದ್ರದ ಆಳದಲ್ಲಿ ಸ್ವಲ್ಪ ಸಮಯ ಪ್ರಯಾಣ ಬೆಳೆಸುವ ಮೂಲಕ ನೌಕಾಪಡೆಯ ಕಾರ್ಯಕ್ಷಮತೆಯನ್ನು ವೀಕ್ಷಿಸಲಿದ್ದಾರೆ. ರಾಷ್ಟ್ರಪತಿಗಳು ಸಬ್‍ಮರೀನ್‍ನಲ್ಲಿ ಪ್ರಯಾಣಿಸುವುದು ಅಪರೂಪದ ಘಟನೆ ಆಗಿದ್ದು, ಈ ವೇಳೆ ಜಲಾಂತರ್ಗಾಮಿ ತಂತ್ರಜ್ಞಾನ, ಭದ್ರತಾ ವ್ಯವಸ್ಥೆಗಳು ಹಾಗೂ ಕಾರ್ಯಾಚರಣೆಯ ಕುರಿತು ನೌಕಾಪಡೆ ಅಧಿಕಾರಿಗಳು ವಿವರ ನೀಡಲಿದ್ದಾರೆ.

ದಾಖಲೆ ಬರೆಯುವ ಮುರ್ಮು
ಮಾಜಿ ರಾಷ್ಟ್ರಪತಿ ದಿ. ಡಾ.ಅಬ್ದುಲ್ ಕಲಾಂ ಅವ ರು ಜಲಾಂತರ್ಗಾಮಿ ನೌಕೆ ಯಲ್ಲಿಯಾನ ಕೈಗೊಂಡ ಮೊ ದಲ ರಾಷ್ಟ್ರಪತಿ ಎನ್ನಿಸಿಕೊಂಡಿ ದ್ದರು. ಅವರು 2006 ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಐಎನ್ ಎಸ್ ಸಿಂಧು ರಕ್ಷಕ್ ಸಬ್ ಮರೀನ್‍ನಲ್ಲಿ 3.5 ತಾಸು ಯಾನ ಮಾಡಿ ದರು. ಆದರೆ ಈಗ ಈ ಸಾಹಸ ಮಾಡಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಕಿರೀ ಟ ಮುರ್ಮು ಮುಡಿಗೇರಲಿದೆ.

ಮುರ್ಮು ಅವರು ಶನಿವಾರ ಸಂಜೆ ಗೋವಾಗೆ ಬಂದಿಳಿ ಯಲಿದ್ದು, ಡಿ.28ರಂದು ಕಾರವಾರಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಕದಂಬ ನೌಕಾ ನೆಲೆಯಲ್ಲಿ ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರದಲ್ಲಿ ಸಂಚರಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಹೇಳಿದೆ.

ಆದರೆ ಯಾವ ಜಲಾಂತ ರ್ಗಾಮಿಯಲ್ಲಿ ಅವರು ಸಂಚರಿಸಲಿದ್ದಾರೆ ಎಂಬ ಮಾಹಿತಿ ನೀಡಿಲ್ಲ.

ಅವರು ಈ ಹಿಂದೆ 2023ರ ಏ.8ರಂದು ಅಸ್ಸಾಂನ ತೇಜ್‍ಪುರದಲ್ಲಿ ಸುಖೋಯ್ 30 ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದರು. ನಂತರ ಇದೇ ವರ್ಷ ಅ.29ರಂದು ಹರ್ಯಾಣದ ಅಂಬಾಲಾದಲ್ಲಿ ರಫೇಲ್ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದರು. ಈ ಮೂಲಕ 2 ಜೆಟ್‍ಗಳಲ್ಲಿ ಪ್ರಯಾಣಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿ ಗಳಿಸಿದ್ದರು.

ರಾಷ್ಟ್ರಪತಿಗಳ ಭದ್ರತೆಯ ದೃಷ್ಟಿಯಿಂದ ಭಾನುವಾರ ಕಾರವಾರ-ಅಂಕೋಲಾ ಕರಾವಳಿ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನ 3.30ರವರೆಗೆ ಮಾಜಾಳಿ ಇಂದ ಹಾರಾವಾಡದವರೆಗೆ ಯಾವುದೇ ಮೀನುಗಾರಿಕಾ ಬೋಟ್‍ಗಳು ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕಾ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮೀನುಗಾರರ ಸಹಕಾರವನ್ನು ಆಡಳಿತ ಕೋರಿದೆ.

ರಾಷ್ಟ್ರಪತಿಯ ಭೇಟಿ ಹಿನ್ನೆಲೆಯಲ್ಲಿ ನೌಕಾನೆಲೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿವೆ. ನೌಕಾಪಡೆಯ ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕರಾವಳಿ ಕಾವಲು ಪಡೆ, ನೌಕಾಪಡೆ, ಪೊಲೀಸ್ ಮತ್ತು ಗುಪ್ತಚರ ಇಲಾಖೆ ಸಂಯುಕ್ತವಾಗಿ ಭದ್ರತಾ ಕಾರ್ಯಾಚರಣೆ ನಡೆಸಿವೆ.

Tags:
error: Content is protected !!