Mysore
27
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಜಲಾಂತರಗಾಮಿ ನೌಕೆಯಲ್ಲಿ ಪ್ರಯಾಣಿಸಿ ಹೊಸ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ಕಾರವಾರ: ದೇಶದ ಪ್ರಥಮ ಪ್ರಜೆಯಾಗಿರುವ ಸೇನಾ ಪಡೆಗಳ ಮಹಾದಂಡ ನಾಯಕಿ ರಾಷ್ಟ್ರಪತಿ ದ್ರೌಪದ ಮುರ್ಮು ಅವರು ಇಂದು ಜಲಾಂತರಗಾಮಿ ನೌಕೆಯಲ್ಲಿ ಪ್ರಯಾಣಿಸುವ ಮೂಲಕ ಹೊಸ ದಾಖಲೆ ಬರೆದರು.

ಈ ಹಿಂದೆ ದಿ. ಎಪಿಜೆ ಅಬ್ದುಲ್ ಕಲಾಂ ಅವರು ಜಲಂತರ್ಗಾಮಿ ನೌಕೆಯಲ್ಲಿ ಪ್ರಯಾಣಿಸಿದ ಮೊಟ್ಟ ಮೊದಲ ರಾಷ್ಟ್ರಪತಿಯಾಗಿದ್ದರು. ನಂತರ ದ್ರೌಪದಿ ಮುರ್ಮು ಅವರು ಕಾರವಾರದ ನೌಕಾ ನೆಲೆಯಲ್ಲಿ ಕೆಲ ಹೊತ್ತು ಪಯಣಿಸುವ ಮೂಲಕ ಜಲಾಂತರಗಾಮಿ ನೌಕೆಯಲ್ಲಿ ಪ್ರಯಾಣಿಸಿದ 2ನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸುಮಾರು ಹೊತ್ತು ಜಲಂತರಗಾಮಿ ನೌಕೆಯಲ್ಲಿ ಪ್ರಯಾಣಿಸಿದ ಅವರಿಗೆ ಕದಂಬ ನೌಕಾ ನೆಲೆಯ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

ಈ ವೇಳೆ ಅವರು ನೌಕಾಪಡೆಯ ಕಾರ್ಯಕ್ಷಮತೆಯನ್ನು ವೀಕ್ಷಿಸಿದರು. ಅಲ್ಲದೆ ಅಧಿಕಾರಿಗಳಿಂದ ಅದರ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು. ಜಲಾಂತರಗಾಮಿ, ಭದ್ರತೆ, ಕಾರ್ಯಾಚರಣೆ ವ್ಯವಸ್ಥೆ ಬಗ್ಗೆಯೂ ಮರ್ಮು ಅವರು ನೌಕಾಪಡೆಯ ಮುಖ್ಯಸ್ಥರಿಂದ ವಿಷಯ ವಿನಿಮಯ ಮಾಡಿಕೊಂಡರು.

ಜಲಾಂತರಗಾಮಿ ನೌಕೆಯಲ್ಲಿ ಪ್ರಯಾಣಿಸುವ ಮೊದಲು ರಾಷ್ಟ್ರಪತಿ ಮುರ್ಮು ಅವರು ಕದಂಬ ನೌಕಾ ನೆಲೆಯಲ್ಲಿ ದೇಶದ ಮೊದಲ ಸ್ವದೇಶಿ ವಿಮಾನ ಯುದ್ಧ ನೌಕೆ ಐಎನ್‍ಎಸ್ ವಿಕ್ರಾಂತ್‍ಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಯುದ್ಧ ನೌಕೆಯ ತಂತ್ರಜ್ಞಾನ, ಕಾರ್ಯಶೈಲಿ, ವಾಯುಪಡೆ, ನೌಕಾಪಡೆ, ಸಂಯುಕ್ತ ಕಾರ್ಯಾಚರಣೆ, ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎದುರಾಳಿಗಳನ್ನು ಎದುರಿಸುವುದು ಸೇರಿದಂತೆ ಸಿಬ್ಬಂದಿಯ ಜೊತೆಗೆ ಮಾಹಿತಿ ವಿನಿಮಯ ಮಾಡಿಕೊಂಡರು.

ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಆಂಕೋಲಾದವರೆಗೆ ಮೀನುಗಾರಿಕೆ ಚಟುವಟಿಕೆಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸುತ್ತಮುತ್ತಲ ಪ್ರದೇಶಗಳಲ್ಲಿ ಒಂದು ದಿನದ ಮಟ್ಟಿಗೆ ಮೀನುಗಾರಿಕೆಯನ್ನು ನಡೆಸದಂತೆ ಸೂಚನೆ ನೀಡಲಾಗಿತ್ತು. ಮಾಜಾಳಿಯಿಂದ ಕಾರವಾರದವರೆಗೆ ಶನಿವಾರ ರಾತ್ರಿಯಿಂದಲೇ ಒಂದೇ ಒಂದು ದೋಣಿಯೂ ಸಮುದ್ರಕ್ಕೆ ಇಳಿಯದಂತೆ ನಿರ್ಬಂಧ ಹಾಕಲಾಗಿತ್ತು.

ರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಕದಂಬ ನೌಕಾ ನೆಲೆಯ ಸುತ್ತಮುತ್ತ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೈ ಅಲರ್ಟ್ ಘೋಷಿಸಲಾಗಿತ್ತು. ವಿಮಾನ ಮತ್ತು ಹೆಲಿಕಾಪ್ಟರ್ ಹಾರಾಟವನ್ನೂ ಸಹ ನಿಷೇಧಿಸಲಾಗಿತ್ತು. ಸಾರ್ವಜನಿಕರಿಗೂ ನಿರ್ಬಂಧ ವಿಧಿಸಲಾಗಿತ್ತು.

ಇದಕ್ಕೂ ಮುನ್ನ ಗೋವಾ ರಾಜಧಾನಿ ಪಣಜಿಯಿಂದ ಭಾರತೀಯ ವಾಯುಪಡೆಗೆ ಸೇರಿದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕದಂಬ ನೌಕೆ ನೆಲೆಗೆ ಆಗಮಿಸಿದ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಕಾರವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ನೌಕಾಪಡೆಯ ಸಿಬ್ಬಂದಿಗಳು ಹಾಗೂ ಜಿಲ್ಲಾಡಳಿತ ಆತ್ಮೀಯವಾಗಿ ಬರಮಾಡಿಕೊಂಡರು.

Tags:
error: Content is protected !!