Mysore
21
clear sky

Social Media

ಶನಿವಾರ, 28 ಫೆಬ್ರವರಿ 2026
Light
Dark

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲೆಲ್ಲಿ ಹೊಸ ವರ್ಷಾಚರಣೆ ನಡೆಯಲಿದೆ. ಜನ ಹೆಚ್ಚು ಸೇರುವುದು ಯಾವ ಜಾಗದಲ್ಲಿ, ಸೂಕ್ಷ್ಮ ಪ್ರದೇಶಗಳು ಯಾವ್ಯಾವುವು, ಈ ಹಿಂದೆ ಎಲ್ಲೆಲ್ಲಿ ಗಲಾಟೆಗಳಾಗಿದ್ದವು. ಎಂಬೆಲ್ಲಾ ಮಾಹಿತಿಗಳನ್ನೊಳಗೊಂಡು ಪೊಲೀಸ್ ಅಧಿಕಾರಿಗಳು ಸಮೀಕ್ಷೆ ನಡೆಸಿ, ಪ್ರತ್ಯೇಕ ಮಾಹಿತಿ ಕಲೆಹಾಕಿದ್ದಾರೆ. ಆ ಕುರಿತ ವರದಿಯನ್ನು ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಸೇರಿ ಇತರ ಪ್ರಮುಖ ನಗರಗಳಲ್ಲಿ, ಪ್ರವಾಸಿತಾಣಗಳಲ್ಲಿ ಮತ್ತು ವನ್ಯಧಾಮಗಳಲ್ಲಿ ಹೊಸ ವರ್ಷಾಚರಣೆ ಪ್ರಸ್ತುತ ದಿನಗಳಲ್ಲಿ ವಾಣಿಜ್ಯ ಚಟುವಟಿಕೆಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ವ್ಯಾಪಾರ-ವಹಿವಾಟಿಗಳಿಗೂ ಧಕ್ಕೆಯಾಗಬಾರದು, ಬೆಂಗಳೂರಿನ ಮತ್ತು ಇತರ ಪ್ರತಿಷ್ಠಿತ ಪ್ರವಾಸಿ ತಾಣಗಳ ವರ್ಚಸ್ಸು ಕುಗ್ಗದಂತೆ ಭದ್ರತೆ ಒದಗಿಸಲು ಸರ್ಕಾರ ಸೂಚನೆ ನೀಡಿದೆ.

ಇದನ್ನು ಓದಿ: ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಪ್ರವಾಸಿಗರಿಗೆ ಮುಜುಗರವಾಗದೆ, ಸಹನೀಯ ವಾತಾವರಣ ನಿರ್ಮಿಸಲು ಸುರಕ್ಷತೆಯ ಖಾತ್ರಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳು ಈಗಾಗಲೇ ನೀಲ ನಕ್ಷೆ ತಯಾರಿಸಿದ್ದಾರೆ ಎಂದು ಹೇಳಲಾಗಿದೆ. ಈ ಮೊದಲು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಣ್ಣಪುಟ್ಟ ಘಟನೆಗಳು ನಡೆದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಕೆಟ್ಟ ಹೆಸರು ಬಂದಿತ್ತು. ಅಂತಾರಾಷ್ಟ್ರಿಯ ಮಾಧ್ಯಮಗಳಲ್ಲಿ ವ್ಯಾಪಕವಾದ ಚರ್ಚೆಗಳಿಗೂ ಕಾರಣವಾಗಿತ್ತು. ಐಟಿ-ಬಿಟಿ ಸಿಟಿಯಲ್ಲಿ ಭದ್ರತೆ ಇಲ್ಲ, ಅದರಲ್ಲೂ ಹೆಣ್ಣು ಮಕ್ಕಳಿಗೆ ಅಸುರಕ್ಷತೆಯ ವಾತಾವರಣ ಇದೆ ಎಂಬಂತೆ ಚಿತ್ರಿತವಾಗಿತ್ತು.

ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಬೆಂಗಳೂರಿನ ಪೊಲೀಸರ ವೈಫಲ್ಯವನ್ನು ಎತ್ತಿ ತೋರಿಸಿತ್ತು. ರಾಜ್ಯ ಸರ್ಕಾರದ ಸಾಮರ್ಥ್ಯಕ್ಕೂ ಸವಾಲೆಸೆದಿತ್ತು. ಮೈಸೂರಿನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಕಾ ಜಾಲ ಪತ್ತೆಯಾಗಿದ್ದು, ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಛೋಟ, ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ಘಟನೆಗಳು, ಕೆಲವು ಭೀಕರ ಕೊಲೆಗಳು, ಬ್ಯಾಂಕ್ ದರೋಡೆಗಳು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಿವೆ.

ನಾಳೆ ಗೃಹ ಸಚಿವರ ಸಭೆ
ಪೊಲೀಸ್ ಅಧಿಕಾರಿಗಳ ಸಮೀಕ್ಷೆ ಆಧರಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮತ್ತು ಹಿರಿಯ ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ವಹಿಸಲು ಗೃಹ ಸಚಿವರು ೨೮ ರಂದು ಉನ್ನತಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಯಾವುದೇ ಅವಘಡವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Tags:
error: Content is protected !!