ಹುಬ್ಬಳ್ಳಿ: 55 ಶಾಸಕರ ಪಟ್ಟಿ ಹಿಡಿದುಕೊಂಡು ಬಿಜೆಪಿ ಇಡಿ ಹೆಸರಿನಲ್ಲಿ ಬೆದರಿಕೆಯೊಡ್ಡಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಅವರದ್ದೇ ಶಾಸಕರ ಖರೀದಿ ನಡೆಯುತ್ತಿದೆ. ಇದು ಹೊರಗೆ ಬರಬಾರದು ಎಂದು ಜನತೆಯ ದಿಕ್ಕು ತಪ್ಪಿಸಲು ಕಾಶಪ್ಪನವರ್ ಸುಳ್ಳು ಆರೋಪ ಮಾಡಿದ್ದಾರೆ. ಅವ್ಯವಹಾರ ನಡೆಸಿದವರು ಮಾತ್ರ ಇಡಿ ದಾಳಿಗೆ ಹೆದರಬೇಕು. ಕಾಶಪ್ಪನವರ್ ಅಂತಹ ತಪ್ಪು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು ಅಧಿಕಾರಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದ ಆಡಳಿತದಲ್ಲಿ ದುಷ್ಪರಿಣಾಮ ಬೀರುತ್ತಿದೆ. ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚುತ್ತಿದೆ. ವರ್ಗಾವಣೆ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.





