ಬೆಂಗಳೂರು : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದು ಪಕ್ಕ. ಆದರೆ 30 ತಿಂಗಳ ನಂತರವೋ ಅಥವಾ ಅದಕ್ಕೂ ಮೊದಲೋ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಛೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಅಧಿಕಾರ ಹಂಚಿಕೆಯ ಗೊಂದಲಗಳು ಈಗಲೂ ರಾಜ್ಯ ಮತ್ತು ದೇಶದ ಜನರಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗುಟ್ಟು ಬಿಟ್ಟುಕೊಡದೆ ಕದನ ಕುತೂಹಲ ಕೆರಳಿಸಿದೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಮತ್ತಷ್ಟು ರಹಸ್ಯ ಕಾಪಾಡಿಕೊಂಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಸತೀಶ್ ಜಾರಕಿಹೊಳಿ, ನಾಯಕತ್ವ ಬದಲಾವಣೆ ಪಕ್ಕಾ ಎಂದಿದ್ದಾರೆ. ಮುಖ್ಯಮಂತ್ರಿ ಹುದ್ದೆಯನ್ನು ಬಿಡಲೇಬೇಕು. ಬಿಡುವುದಂತೂ ಖಚಿತವಾಗಿದೆ. ೩೦ ತಿಂಗಳ ನಂತರವಾದರೂ ಬಿಡಲೇಬೇಕಾಗಿದೆ. ಈ ಅವಧಿಯಲ್ಲಿ ಅಧಿಕಾರ ಬಿಟ್ಟುಕೊಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:-ಷೇರು ಮಾರುಕಟ್ಟೆ ಹೆಸರಲ್ಲಿ ವಂಚನೆ : ದೂರು
ಆದರೂ ತಮ್ಮ ಹೇಳಿಕೆಯನ್ನು ತಿಳಿಗೊಳಿಸಲು ಯತ್ನಿಸಿರುವ ಸತೀಶ್ ಜಾರಕಿಹೊಳಿ, ಅಧಿಕಾರ ಹಂಚಿಕೆಯ ಸಂಬಂಧ ಪಟ್ಟಂತೆ ಎಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದೆ. ವರಿಷ್ಠರು ಹೇಳಿದಂತೆ ಸಿಎಂ, ಡಿಸಿಎಂ ನಡೆದುಕೊಳ್ಳುತ್ತಾರೆ ಎಂದಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಸಿದ್ದರಾಮಯ್ಯ ಅವರ ಈ ಹೇಳಿಕೆ ಹೊಸದು ಅಲ್ಲ, ತ್ಯಾಗದ ಮನಸ್ಥಿತಿಯೂ ಇಲ್ಲ. ೧೦ ಬಾರಿ ಮುಖ್ಯಮಂತ್ರಿಯಾದರು ಯಾವತ್ತಾದರೂ ಒಂದು ದಿನ ಅಧಿಕಾರ ಬಿಡಲೇ ಬೇಕಿದೆ. ಅದು ಯಾವಾಗ ಎಂಬುದು ವರಿಷ್ಠರಿಗೆ ಮಾತ್ರ ಗೊತ್ತಿದೆ ಎಂದರು.
ಎಲ್ಲವೂ ಸುಖಾಂತ್ಯವಾಗಿ ನಡೆಯಬೇಕು. ಹೈಕಮಾಂಡ್ ಇದನ್ನು ಯಾವ ರೀತಿ ಬಗೆಹರಿಸುತ್ತದೆ ಎಂದು ಶಾಸಕರು ಕಾದು ನೋಡುತ್ತಿದ್ದಾರೆ. ಪಕ್ಷದಲ್ಲಿ ಒಳ್ಳೆಯ ವಾತಾವರಣ ಇರಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದರು.





