Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮತ್ತೆ ಮುನ್ನೆಲೆಗೆ ಬಂದ ಅಧಿಕಾರ ಹಂಚಿಕೆ ಸೂತ್ರ ; ಡಿಕೆಶಿ ಪರ ದಿಲ್ಲಿಗೆ ತೆರಳಿಕ ʻಕೈʼ ಪ್ರಮುಖರು

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳಿಸಿರುವ ಬೆನ್ನಲ್ಲೇ, ಅಧಿಕಾರ ಹಂಚಿಕೆ ಸೂತ್ರ ಮತ್ತೆ ಮುನ್ನೆಲೆಗೆ ಬಂದಿದೆ.

ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶದಿಂದ ಆಘಾತಕ್ಕೆ ಒಳಗಾಗಿರುವ ಎಐಸಿಸಿ ವರಿಷ್ಠರು ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ವಿಷಯವನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಮುಂದೂಡುವ ಪ್ರಯತ್ನ ನಡೆಸಿದ್ದರು. ಹೀಗಾಗಿ ಎಲ್ಲವೂ ಸುಖಾಂತ್ಯ ಕಂಡಿದೆ ಎಂದು ಭಾವಿಸಲಾಗಿತ್ತು. ಆದರೆ, ಗುರುವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ನೇತ್ರತ್ವದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರವಾಗಿ ಕೆಲವು ಶಾಸಕರು ದೆಹಲಿಗೆ ತೆರಳಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ವಿಶೇಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಬಣದಲ್ಲಿ ಗುರುತಿಸಿಕೊಂಡವರು ದಿಢೀರ್ ದೆಹಲಿ ಪ್ರಯಾಣ ಕೈಗೊಂಡಿದ್ದಾರೆ. ಸಚಿವ ಚೆಲುವರಾಯಸ್ವಾಮಿ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಾಗಡಿ ಶಾಸಕ ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ್ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕಾಂಗ್ರೆಸ್‌ನ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದಾರೆ.

ಮೇಲ್ನೋಟಕ್ಕೆ ಸಚಿವರು ಹಾಗೂ ಶಾಸಕರ ನಿಯೋಗವನ್ನು ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಲು ಡಿಕೆ ಸಹೋದರರು ಕಳಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಎಲ್ಲಿಯೂ ಅವರ ಬೆಂಬಲಿಗರು ಈ ಬಗ್ಗೆ ಗುಟ್ಟು ಬಿಟ್ಟು ಕೊಡದಿರುವುದು ನಾನಾ ಊಹಾಪೋಹಗಳನ್ನು ಹುಟ್ಟುಹಾಕಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶಕ್ಕೆ ತೆರಳಿದ್ದು, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೇವಾಲ
ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಂಭವವಿದೆ.

ಇದನ್ನೂ ಓದಿ:-ಹಗಲು ದರೋಡೆ, ಬ್ಯಾಂಕುಗಳಲ್ಲಿ ಸುರಕ್ಷತೆ ಇಲ್ಲ : ಆರ್‌.ಅಶೋಕ ಆರೋಪ

ದೆಹಲಿಗೆ ತೆರಳಿವವರು ತಾವು ಯಾರನ್ನು ಭೇಟಿಯಾಗುತ್ತೇವೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಬಗ್ಗೆ ವಿವಿಧ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಇದೊಂದು ಸೌಹಾರ್ದತವಾದ ಭೇಟಿಯಷ್ಟೇ .ಇದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಅವರೇ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂಬುದನ್ನು ನೆನಪಿಸುವಂತೆ ಸೂಚನೆ ನೀಡಿದ್ದಾರೆ.
ಇಂತಹ ಅವಕಾಶ ಬಿಟ್ಟರೆ ಮತ್ತೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಸಮಯ ಸಿಗುವುದಿಲ್ಲ. ದೆಹಲಿಯಲ್ಲಿ ಯಾರು ಯಾರು ಸಿಗುತ್ತಾರೋ ಅವರನ್ನೆಲ್ಲ ಭೇಟಿ ಮಾಡಿ ಮಾತುಕತೆ ನಡೆಸಬೇಕೆಂದು ಸಲಹೆ ಮಾಡಿದ್ದಾರೆ.

ಖುದ್ದು ಸದಾಶಿವನಗರ ಶಕ್ತಿಕೇಂದ್ರದಿಂದಲೇ ಆದೇಶ ಬಂದ ಹಿನ್ನೆಲೆಯಲ್ಲಿ ದೌಡಾಯಿಸಿದ ಶಾಸಕರು ಶುಕ್ರವಾರ ಮಧ್ಯಾಹ್ನ 3:00ಯ ವಿಮಾನವೇರಿ ದೆಹಲಿಗೆ ಹಾದಿದ್ದರೆ. ಶನಿವಾರ ಇಲ್ಲವೇ ಭಾನುವಾರ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಇನ್ನೊಂದು ಮೂಲಗಳ ಪ್ರಕಾರ ಶಿವಕುಮಾರ್ ಅತಿಯಾಗಿ ನಂಬಿರುವ ಹಾಗೂ ಈಗಲೂ ಅದೇ ವಿಶ್ವಾಸ ಉಳಿಸಿಕೊಂಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ವೈನಾಡು ಸಂಸದೆ ಪ್ರಿಯಾಂಕ ವಾದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ. ಇಬ್ಬರ ಬೇಟಿಗೆ ದೆಹಲಿಯಲ್ಲಿ ಪ್ರಮುಖರೊಬ್ಬರು ಎಲ್ಲವನ್ನು ಪೂರ್ಣಗೊಳಿಸಿದ್ದಾರೆಂದು ತಿಳಿದು ಬಂದಿದೆ.

ಕಾಂಗ್ರೆಸ್ ಹೈಕಮಾಂಡ್ ಎದುರು ಸಿಎಂ ಬದಲಾವಣೆಗೆ ಪಟ್ಟು ಹಿಡಿಯಲಿರುವ ಡಿಕೆಶಿ ಆಪ್ತ ಶಾಸಕರು, ಒಕ್ಕಲಿಗೆ ಟ್ರಂಪ್ ಕಾರ್ಡ್ ಪ್ಲೇ ಮಾಡುವ ಪ್ಲಾನ್ ಮಾಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿದೆ. ಡಿಕೆಶಿವಕುಮಾರ್‌ಗೆ ಸಿಎಂ ಆಗುವ ಅವಕಾಶ ನೀಡದಿದ್ದರೆ ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಡ್ಯಾಮೇಜ್ ಆಗಲಿದೆ ಎಂಬ ವಾದವನ್ನು ಹೈಕಮಾಂಡ್ ಮುಂದೆ ಮಂಡಿಸುವ ಸಾಧ್ಯತೆ ಇದೆ.

ಕೊಟ್ಟ ಮಾತು ನೆನಪಿಸಿದರಾ?
ಬೆಂಗಳೂರಿನಲ್ಲಿ ಮಾತಾಡಿದ ಮಾಜಿ ಸಂಸದ ಡಿ.ಕೆ ಸುರೇಶ್ ಅವರು ನಯವಾದ ಮಾತಿನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನ ಕುಟುಕಿದ್ದಾರೆ. ಸಿದ್ದರಾಮಯ್ಯ ಅವರಿಗೂ ಜವಾಬ್ದಾರಿ ಇದೆ. ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ಡಿಕೆ ಸುರೇಶ್​ ಮಾರ್ಮಿಕವಾಗಿ ನುಡಿದ್ದಾರೆ.

ಹಿಂದಿನ ಸರ್ಕಾರ ಕೂಡ ಮಾತಿನ ಪ್ರಕಾರವೇ ಸಿದ್ದರಾಮಯ್ಯ ನಡೆಸಿದ್ದಾರೆ. ಈಗಿನ ಸರ್ಕಾರದಲ್ಲೂ ಕೂಡ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಮುಂದೆಯೂ ಕೊಟ್ಟ ಮಾತಿನ ಪ್ರಕಾರವೇ ನಡೆದುಕೊಳ್ಳುತ್ತಾರೆ. ನನ್ನಣ್ಣನಿಗೆ ಅದೃಷ್ಟ ಇದ್ದರೆ ಸಿಎಂ ಆಗ್ತಾರೆ. ಇದಕ್ಕೆಲ್ಲಾ ಹೈಕಮಾಂಡ್​ ಸೂಕ್ತ ಉತ್ತರ ನೀಡುತ್ತೆ ಎಂದು ಡಿಕೆ ಸುರೇಶ್​ ಭರವಸೆಯ ಮಾತಾಡಿದ್ದಾರೆ.

ದೆಹಲಿಗೆ ತೆರಳಿವವರು ಯಾರು?
ಸಚಿವ ಚಲುವರಾಯಸ್ವಾಮಿ
ಶಿವಾನಂದ ಪಾಟೀಲ್- ಸಕ್ಕರೆ ಸಚಿವ
ಶಿವಣ್ಣ- ಆನೇಕಲ್
ಶ್ರೀನಿವಾಸ್- ನೆಲಮಂಗಲ
ಡಾ. ರಂಗನಾಥ್- ಕುಣಿಗಲ್
ಇಕ್ಬಾಲ್ ಹುಸೇನ್- ರಾಮನಗರ
ಶ್ರೀನಿವಾಸ್- ಗುಬ್ಬಿ
ದಿನೇಶ್ ಗೂಳಿಗೌಡ- ವಿಧಾನಪರಿಷತಚ ಸದಸ್ಯ

ಸಚಿವ ಚಲುವರಾಯಸ್ವಾಮಿ ದೆಹಲಿಗೆ ತೆರಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ದಾಳ ಪ್ರಯೋಗಿಸಿದ್ದು ಇಂದು ತುರ್ತು ಕೃಷಿ ಸಚಿವರ ಸಭೆಯನ್ನು ಕರೆದಿದ್ದಾರೆ.

ಡಿಕೆ ಶಿವಕುಮಾರ್‌ ಬೆಂಬಲಿಸುವ ಸಚಿವರು ಮತ್ತು ಶಾಸಕರು ಶಕ್ತಿ ಪ್ರದರ್ಶನ ಮಾಡಲು ದಿಢೀರ್‌ ದೆಹಲಿಗೆ ಹಾರಿದ್ದಾರೆ. ಈ ಬಣದ ನಾಯಕತ್ವವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ವಹಿಸಿಕೊಂಡಿದ್ದಾರೆ.

ಚಲುವರಾಯಸ್ವಾಮಿ ದೆಹಲಿಗೆ ಹೋದ ಬೆನ್ನಲ್ಲೇ. ಗುರುವಾರ ರಾತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ವಾಸ್ತವ್ಯ ಹೂಡಬೇಕಿತ್ತು. ಆದರೆ ಸಿಎಂ ಮೈಸೂರು ವಾಸ್ತವ್ಯವನ್ನು ರದ್ದು ಮಾಡಿ, ಶುಕ್ರವಾರ ಬೆಳಗ್ಗೆ 10:30ಕ್ಕೆ ತಮ್ಮ ಸರಕಾರಿ ನಿವಾಸ ಕಾವೇರಿಯಲ್ಲಿ ಕೃಷಿ ಸಚಿವರ ಜೊತೆ ಮೆಕ್ಕೆಜೋಳ ಖರೀದಿಸುವ ಸಂಬಂಧ ತುರ್ತು ಸಭೆ ಕರೆದಿದ್ದು ಸೂಚನಾ ಪತ್ರ ಹೊರಡಿಸಿದ್ದಾರೆ. ಹೆಸರಿಗೆ ಮೆಕ್ಕೆಜೋಳದ ಸಭೆಯನ್ನು ಕರೆದಿದ್ದರೂ ದೆಹಲಿ ಯಾತ್ರೆ ಒಗ್ಗಟ್ಟು ಮುರಿಯಲೆಂದೇ ಈ ಸಿದ್ದರಾಮಯ್ಯ ಈ ತಂತ್ರ ಹೂಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ತುರ್ತು ಸಭೆ ನೆಪದಲ್ಲಿ ಚಲುವರಾಯಸ್ವಾಮಿ ಅವರನ್ನು ಸಮಾಧಾನ ಮಾಡಲು ಸಿದ್ದರಾಮಯ್ಯ ಕಸರತ್ತು ಆರಂಭಿಸಿದ್ದಾರೆ.

Tags:
error: Content is protected !!