Mysore
28
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಅಧಿಕಾರ ಯಾರಿಗೂ ಶಾಶ್ವತವಲ್ಲ : ಚರ್ಚೆಗೆ ಗ್ರಾಸವಾದ ಡಿಕೆಶಿ ಮಾರ್ಮಿಕ ಮಾತು

ಬೆಂಗಳೂರು: ‘ಅಧಿಕಾರ ಸ್ಥಾನದಲ್ಲಿ ಯಾರು ಎಷ್ಟು ದಿನ ಇರುತ್ತೇವೆ ಎಂಬುದು ಮುಖ್ಯವಲ್ಲ. ನಾನು ಇಲ್ಲಿ ಶಾಶ್ವತವಾಗಿ ಇರುವುದಿಲ್ಲ ಎಂಬ ಅರಿವಿದೆ. ಅಧಿಕಾರ ಸಿಗಬೇಕಾದರೆ, ಶ್ರಮಬೇಕು. ಅಧಿಕಾರ ಸಿಕ್ಕೇ ಸಿಗುತ್ತದೆ. ಮನಸ್ಸಿದ್ದರೆ ಮಾರ್ಗ. ಭಕ್ತಿ ಇದ್ದರೆ, ಭಗವಂತ’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಡಿರುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿ ಅವರ ೧೦೮ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರ ಮಾರ್ಮಿಕ ಮಾತುಗಳು, ವಿಷಾದದ ಪ್ರತಿಕ್ರಿಯೆಗಳು ಕುತೂಹಲ ಕೆರಳಿಸಿವೆ.

ದಿಲ್ಲಿ ಭೇಟಿಯ ಬಳಿಕ ಡಿ.ಕೆ.ಶಿವಕುಮಾರ್ ಅವರ ಪ್ರತಿಯೊಂದು ಮಾತೂ ನಾನಾ ಅರ್ಥಗಳನ್ನು ಸೃಷ್ಟಿಸುತ್ತಿದೆ. ಬಿಹಾರ ಮತ್ತು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗಳಲ್ಲಿ ಹೆಚ್ಚು ಕಮ್ಮಿಯಾಗಿದೆ. ಎಲ್ಲದಕ್ಕೂ ಒಂದು ಕೊನೆ ಇರುತ್ತದೆ. ಅದಕ್ಕೆ ತಲೆ ಕೆಡೆಸಿಕೊಳ್ಳಬೇಡಿ. ನಾನು ಇರುತ್ತೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ಮುಂದಿನ ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಽಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸ ನನಗಿದೆ. ನಿಮ್ಮ ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ ಎಂದರು.

ನನಗೆ ಮೊದಲು ಪಕ್ಷ ಮುಖ್ಯ. ನಿಗಮ ಮಂಡಳಿಗಳ ನಿರ್ದೇಶಕರು, ಸದಸ್ಯರ ನೇಮಕಾತಿಯನ್ನು ಈವರೆಗೂ ಬಾಕಿ ಇಟ್ಟಿದ್ದೇನೆ. ಈಗಾಗಲೇ ನನಗೆ ಒಂದು ಪಟ್ಟಿ ಕೊಟ್ಟಿದ್ದಾರೆ. ಅದನ್ನು ಮರು ಪರಿಶೀಲಿಸುತ್ತಿದ್ದೇನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸಣ್ಣ ಸ್ಥಾನಮಾನವನ್ನಾದರೂ ನೀಡಬೇಕು ಎಂಬುದು ನನ್ನ ಅಭಿಲಾಷೆ ಎಂದರು.

ಇದನ್ನೂ ಓದಿ:-ಸಕ್ಕರೆ ಕೆಜಿಗೆ 40 ರೂ.ಗೆ ಹೆಚ್ಚಳ ; ನಮ್ಮ ಮನವಿ ಮೇರೆಗೆ ಏರಿಕೆ : ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಕಚೇರಿ ದೇವಸ್ಥಾನ ಎಂಬುದನ್ನು ಕೆಲವರು ಮರೆತಿದ್ದಾರೆ. ಅಧಿಕಾರ ಬೇಕು, ಪಕ್ಷ ಬೇಡ ಎನ್ನುವವರಿಗೆ ದಿಲ್ಲಿಯವರೇ ಉತ್ತರ ಕೊಡುತ್ತಾರೆ. ನಾನು ಉತ್ತರ ನೀಡುವುದಿಲ್ಲ. ನಾನು ಇರುತ್ತೇನೋ, ಇಲ್ಲವೋ ಅದು ಬೇರೆ ವಿಚಾರ. ಆದರೆ ನನ್ನ ಕಾಲದಲ್ಲಿ ೧೦೦ ಕಾಂಗ್ರೆಸ್ ಕಚೇರಿ ಆಗಿದ್ದಂತೂ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.

ಅಧ್ಯಕ್ಷರಾಗಿ ನೀವೇ ಮುಂದುವರಿಯಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದಾಗ, ನಾನೇ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷ ಆಗಿದೆ. ಮಾರ್ಚ್‌ಗೆ ಆರು ವರ್ಷವಾಗಲಿವೆ. ನಾನು ಮುಂಚೂಣಿ ನಾಯಕತ್ವದಲ್ಲಿ ಇರುತ್ತೇನೆ. ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದರು.

ಬಿಬಿಎಂಪಿ ಚುನಾವಣೆ
ಗ್ರೇಟರ್ ಬೆಂಗಳೂರಿನ ೩೪೯ ವಾರ್ಡ್‌ಗಳ ಮೀಸಲಾತಿ ಪಟ್ಟಿಗೆ ಮಂಗಳವಾರವಷ್ಟೇ ತಾವು ಸಹಿ ಹಾಕಿದ್ದು, ಶೀಘ್ರದಲ್ಲೇ ಪ್ರಕಟವಾಗಬಹುದು. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನಂತೂ ನಿಲ್ಲಿಸಲಾಗುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರ ಜಾರಿಗೊಳಿಸಿದ ಖಾತಾ ಆಂದೋಲನ, ಬಿ ಖಾತೆಯಿಂದ ಎ ಖಾತಾ ಪರಿವರ್ತನೆ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಬೇಕು ಮತ್ತು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಚರ್ಚೆಗೆ ಆಸ್ಪದ
ಕೆಪಿಸಿಸಿ ಅಧ್ಯಕ್ಷ ಸ್ಥಾನ, ನಾಯಕತ್ವ ಬದಲಾವಣೆ ಸೇರಿದಂತೆ ನಾನಾ ರೀತಿಯ ಚರ್ಚೆಗಳ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಮಾರ್ಮಿಕ ಹೇಳಿಕೆಗಳು ರಾಜಕೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸಬೇಕು. ಜೊತೆಗೆ ಜಾತಿವಾರು ಇನ್ನು ಮೂರ್ನಾಲ್ಕು ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಬೇಡಿಕೆ ವ್ಯಾಪಕವಾಗಿದೆ. ಈ ಹಂತದಲ್ಲಿ ಅವರ ಹೇಳಿಕೆ ಕುತೂಹಲ ಕೆರಳಿಸಿದೆ.

Tags:
error: Content is protected !!