ತುಮಕೂರು: ಸೆಪ್ಟೆಂಬರ್ ವೇಳೆಗೆ ರಾಜಕೀಯ ಕ್ರಾಂತಿಯಾಗಲಿದೆ ಎಂಬ ಹೇಳಿಕೆಯನ್ನು ಪುನರುಚ್ಚರಿಸಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು, ಈ ರೀತಿಯ ಕ್ರಾಂತಿ ಕಾಂಗ್ರೆಸ್ ಪಕ್ಷದಲ್ಲೇ ನಡೆಯುತ್ತದೆ ಎಂದು ಏಕೆ ಭಾವಿಸಬೇಕು. ಬಿಜೆಪಿಯಲ್ಲೂ ಆಗಬಹುದು ಅಥವಾ ಕೇಂದ್ರ ಸರ್ಕಾರದಲ್ಲೂ ಆಗಬಹುದು ಎಂದು ಹೇಳಿದ್ದಾರೆ.
ಈ ಕುರಿತು ತುಮಕೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೆಪ್ಟೆಂಬರ್‌ನಲ್ಲಿ ಚಳಿ ಇರುತ್ತದೆ. ಅದಕ್ಕಾಗಿ ಸ್ವಲ್ಪ ಬಿಸಿಯಾಗಲಿ ಎಂದು ರಾಜಕೀಯ ಕ್ರಾಂತಿಯ ಬಗ್ಗೆ ಹೇಳಿದ್ದೇನೆ. ರಾಜಕೀಯ ಬದಲಾವಣೆಯ ಬಗ್ಗೆ ಸೆಪ್ಟೆಂಬರ್‌ನಲ್ಲೇ ಹೇಳುತ್ತೇನೆ, ಈಗ ಹೇಳುವುದಿಲ್ಲ ಎಂದರು.
ಕ್ರಾಂತಿ ಎಂದರೆ ಹಲವು ರೀತಿಗಳಿವೆ. ಬಾಬು ಜಗಜೀವನರಾವ್ ಹಸಿರು ಕ್ರಾಂತಿ ಮಾಡಿದರು. 1919ರ ಅಕ್ಟೋಬರ್‌ನಲ್ಲಿ ರಷ್ಯಾದಲ್ಲಾದ ಕ್ರಾಂತಿಯನ್ನೇ ನೆನಪಿಸಿಕೊಳ್ಳಬೇಕೇ? ಎಂದರು.
ಕಾಂಗ್ರೆಸ್‍ನಲ್ಲೇ ಕ್ರಾಂತಿಯಾಗುತ್ತದೆ ಎಂದು ಭಾವಿಸಬಾರದು. ಬಿಜೆಪಿಯಲ್ಲೂ ಕ್ರಾಂತಿಯಾಗಬಹುದು. ಆರ್ಎಸ್‍ಎಸ್‍ನಲ್ಲಿ 75 ವರ್ಷಗಳ ಬಳಿಕ ಯಾರೂ ಜವಾಬ್ದಾರಿ ಸ್ಥಾನದಲ್ಲಿರಬಾರದು ಎಂದು ನಿಯಮ ಇದೆ. ಅದರಿಂದಾಗಿಯೇ ಎಲ್.ಕೆ.ಅಡ್ವಾಣಿಯವರನ್ನು ಬದಿಗಿರಿಸಿ ನರೇಂದ್ರ ಮೋದಿ ರಾಜಕೀಯ ಮುನ್ನೆಲೆಗೆ ಬಂದರು. ಅದೇ ನಿಯಮ ಈಗ ಮೋದಿಯವರಿಗೂ ಅನ್ವಯವಾಗುತ್ತದೆ. ಮಾರ್ಗದರ್ಶಕ ಮಂಡಳಿಗೆ ಮೋದಿ ಹೋಗಬೇಕಾಗುತ್ತದೆ. ಕೇಂದ್ರದಲ್ಲೂ ಬದಲಾವಣೆಯಾಗುತ್ತದೆ. ಬೇರೆಯವರಿಗೆ ಅವಕಾಶ ಸಿಗುತ್ತದೆ. ಅದು ಕ್ರಾಂತಿಯಲ್ಲವೇ? ಎಂದು ಪ್ರಶ್ನೆ ಮಾಡಿದರು.
ಇನ್ನು ಡಿ.ಕೆ.ಶಿವಕುಮಾರ್ ಪ್ರಧಾನಿಯಾಗುತ್ತಾರೋ, ಮುಖ್ಯಮಂತ್ರಿಯಾಗುತ್ತಾರೋ ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಇದೇ.30ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಅವರು ಬಂದು ಈ ರೀತಿ ಮಾತನಾಡಬೇಡಿ ಎಂದು ತಾಕೀತು ಮಾಡಿದರೂ ನಾನು ಕೇರ್ ಮಾಡುವುದಿಲ್ಲ ಎಂದು ಹೇಳಬೇಕೆಂಬುದು ಮಾಧ್ಯಮಗಳ ನಿರೀಕ್ಷೆ. ಆದರೆ ನಾನು ಆ ರೀತಿ ಹೇಳುವುದಿಲ್ಲ ಎಂದರು.





