ಬೆಂಗಳೂರು: ತಮ್ಮ ಹಕ್ಕಿಗಾಗಿ ಫ್ರೀಡಂಪಾರ್ಕ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಟೆಂಟ್‌ಅನ್ನು ಪೊಲೀಸರ ಮುಖಾಂತರ ಕಿತ್ತುಹಾಕಿಸುವ ಮೂಲಕ ರಾಜ್ಯ ಸರ್ಕಾರ ಹಿಟ್ಲರ್ ಧೋರಣೆ ತೋರಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಟ್ವೀಟ್ ಮಾಡಿರುವ ಅವರು, ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ ಚುನಾವಣಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಿದ ಭರವಸೆಗಳನ್ನು ಮರೆತು ಈಗ ಅವರ ಮೇಲೆ ದರ್ಪ ತೋರಿಸುತ್ತಿದ್ದೀರಾ. ಕೊರೆಯುವ ಚಳಿಯನ್ನು ಲೆಕ್ಕಿಸದೇ 4 ದಿನದಿಂದ ಆಹೋರಾತ್ರಿ ಪ್ರತಿಭಟಿಸುತ್ತಿರುವ ಮಹಿಳೆಯರ ಬಳಿ ಹೋಗಿ ಕನಿಷ್ಠ ಪಕ್ಷ ಅವರ ಸಮಾಧಾನ ಪಡಿಸುವ ಸೌಜನ್ಯವೂ ನಿಮ್ಮ ಸರ್ಕಾರಕ್ಕೆ ಇಲ್ಲ. ಈಗ ಅವರ ಶಾಂತಿಯುತ ಪ್ರತಿಭಟನೆಗೂ ಅಡ್ಡಿಪಡಿಸುವುದು ಯಾವ ನ್ಯಾಯ ಎಂದು ಆರೋಪಿಸಿದರು.
ತಮ್ಮ ನಾಯಕ ರಾಹುಲ್ ಗಾಂಧಿ ಅವರು ಹೋದ ಕಡೆಯೆಲ್ಲಾ ಸಂವಿಧಾನ ಪ್ರದರ್ಶನ ಮಾಡುತ್ತಾರೆ. ಆದರೆ ನೀವು ಸಾಮಾನ್ಯ ನಾಗರೀಕರು ಪ್ರತಿಭಟಿಸುವ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಿರಾ. ನಿಮ್ಮ ಹಿಟ್ಲರ್ ಧೋರಣೆ ಜಾಸ್ತಿ ಸಮಯ ನಡೆಯುವುದಿಲ್ಲ. ರಾಜ್ಯದ ಜನತೆ ನಿಮ್ಮ ಸರ್ಕಾರದ ವಿರುದ್ಧ ತಿರುಗಿ ಬೀಳುವ ದಿನ ಬಹಳ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.