ಬೆಂಗಳೂರು: ಚಿತ್ತಾಪುರದಲ್ಲಿ ಆರ್ ಎಸ್‍ಎಸ್ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿರುವ ತಹಶೀಲ್ದಾರ್ ಅವರ ಆದೇಶಕ್ಕೆ ಹೈಕೋರ್ಟ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಮುಂದೆ ಅನುಮತಿ ನೀಡುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದೆ. ಇದರಿಂದಾಗಿ ಯಾವುದೇ ಮುಖ ಭಂಗವಾಗಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ಚಿತ್ತಾಪುರದಲ್ಲಿ ಆರ್‌ಎಸ್‍ಎಸ್ ಪಥಸಂಚಲನ ನಡೆಸಲು ಅನುಮತಿ: ಸಚಿವ ಪ್ರಿಯಾಂಕ್ ಖರ್ಗೆಗೆ ಮುಖಭಂಗ
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್‍ನಲ್ಲಿ ನಡೆದ ವಾದ ವಿವಾದದಲ್ಲಿ ನ್ಯಾಯಾಧೀಶರು ಕಾನೂನು ಸುವ್ಯಸ್ಥೆ ರಕ್ಷಣೆ ರಾಜ್ಯ ಸರ್ಕಾರದ ಜವಾಬ್ದಾರಿ. ಹೀಗಾಗಿ ಸ್ಥಳೀಯ ಪರಿಸ್ಥಿತಿ ಮತ್ತು ವಾಸ್ತವಾಂಶಗಳನ್ನು ಆಧರಿಸಿ, ಪಥ ಸಂಚಲನಕ್ಕೆ ಅನುಮತಿ ನೀಡುವ ಅಥವಾ ನೀಡದಿರುವ ನಿರ್ಧಾರ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ ಎಂದರು.
ವಾದ ಪ್ರತಿವಾದದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನ್ಯಾಯಾಧೀಶರ ಸಲಹೆ ಮೇರೆಗೆ ಆರ್ ಎಸ್‍ಎಸ್ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ, ಪರಿಶೀಲಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಮುಂದೆ ಪಥ ಸಂಚಲನ ನಡೆಸುವುದಾದರೆ ಆರ್‍ಎಸ್‍ಎಸ್ ಅರ್ಜಿ ಸಲ್ಲಿಸಲಿ. ಅದನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಪರಿಶೀಲಿಸಲಿದೆ ಎಂದು ಸ್ಪಷ್ಟಪಡಿಸಿದರು.




