ಬೆಂಗಳೂರು: ತನ್ನ ಆಂತರಿಕ ಕಚ್ಚಾಟದಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೊರ ಬರದಿದ್ದರೆ, ಮುಂದಿನ ವಿಧಾನಸಭೆ ಚುನಾಣೆಯಲ್ಲಿ ರಾಜ್ಯದ ಜನತೆ ಇವರನ್ನು ಮನೆಗೆ ಶಾಶ್ವತವಾಗಿ ಕಳುಹಿಸುವುದು ಗ್ಯಾರಂಟಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಕೊಳ್ಳಿ ಇಡಲು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರೊಬ್ಬರೇ ಸಾಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಬ್ಬ ವೀಕ್ ಲೀಡರ್ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆಯುತ್ತಾರೆ. ಪ್ರತಿದಿನ ಒಂದಿಲ್ಲೊಂದು ಕಚ್ಚಾಟ ನಡೆಯುತ್ತಲೇ ಇದೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಕಾಂಗ್ರೆಸ್ ಮನೆಗೆ ಹೋಗುವುದು ಗ್ಯಾರಂಟಿ ಎಂದು ಕುಹುಕವಾಡಿದರು.
ಇದನ್ನೂ ಓದಿ :-ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಡಾ. ಶಾಮನೂರು ಶಿವಶಂಕಪ್ಪಗೆ ನುಡಿ ನಮನ
ಉರಿಯುವ ಬೆಂಕಿಗೆ ತುಪ್ಪ ಸುರಿಯಬೇಡಪ್ಪ ಎಂದು ಸದನದಲ್ಲಿ ಸಿಎಂ ನನಗೆ ಹೇಳಿದರು. ಈಗ ಅವರ ಶಿಷ್ಯ ರಾಜಣ್ಣ ಕೊಳ್ಳಿ ಇಡಲು ಹೊರಟ್ಟಿದ್ದಾರೆ. ಅಂದರೆ ಅವರು ಡಿಕೆಶಿ ವಿರುದ್ಧ ಇದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನೀವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದರರ್ಥ ಹೈಕಮಾಂಡ್ ಕೂಡ ವೀಕ್ ಆಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಮೇಲಿಂದ ಮೇಲೆ ಡಿನ್ನರ್ ಪಾಲಿಟಿಕ್ಸ್ ಮಾಡುತ್ತಲೇ ಇದ್ದಾರೆ. ಡಿಕೆ ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಅಧಿವೇಶಕ್ಕೂ ಶಿವಕುಮಾರ್ ಬರುತ್ತಿರಲಿಲ್ಲ. ಅಧಿವೇಶನ ನಡೆಯುತ್ತಿರುವಾಗ ಜನಪ್ರತಿನಿಧಿಯಾಗಿ ಕೆಲಸ ಮಾಡಬೇಕಿತ್ತು. ಅದು ಬಿಟ್ಟು ಜನರ ತೆರಿಗೆ ಹಣದಲ್ಲಿ ದೇವಸ್ಥಾನ ಸುತ್ತಿ ಬಂದಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ ಎನ್ನುತ್ತಿದ್ದಾರೆ. ಅದರ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.





