ಮಂಗಳೂರು: ರಾಜ್ಯದಲ್ಲಿ ಯಾವ ಕ್ರಾಂತಿಯೂ ಆಗಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಹಾಗೂ ದಸರಾವನ್ನು ಹೊಸ ಸಿಎಂ ಉದ್ಘಾಟನೆ ಮಾಡುತ್ತಾರೆ ಎಂಬ ಆರ್.ಅಶೋಕ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಕ್ರಾಂತಿ ಅಂತಹ ಪದಗಳು ಸರಿಯಲ್ಲ. ರಾಜ್ಯದಲ್ಲಿ ಯಾವ ಕ್ರಾಂತಿಯೂ ಆಗಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಮೂರು ತಿಂಗಳಿನಲ್ಲಿ ಸರ್ಕಾರ ಬಿದ್ದು ಹೋಗುತ್ತೆ ಎಂದು ಬಿಜೆಪಿಯವರು ಹೇಳಿಕೆ ನೀಡುತ್ತಿದ್ದಾರೆ. ಅದು ತಿರುಕನ ಕನಸು. ಜನ ಬಿಜೆಪಿಗರನ್ನು ಮನೆಗೆ ಕಳಿಸಿದ್ದಾರೆ. ನಮ್ಮ ಬಟ್ಟಲಲ್ಲಿ ಸೊಳ್ಳೆ ಇದ್ರೆ ಅವರ ಬಟ್ಟಲಿನಲ್ಲಿ ಹೆಗ್ಗಣ ಬಿದ್ದಿದೆ ಎಂದು ಕಿಡಿಕಾರಿದರು.





