ಬೆಂಗಳೂರು: ಮುಡಾ ಪ್ರಕರಣದಲ್ಲಿ ವಿರೋಧಪಕ್ಷಗಳಾದ ಬಿಜೆಪಿ, ಜೆಡಿಎಸ್ ಹೋರಾಟ ಮಾಡಿದ್ದವು. ಈಗ ಸುಪ್ರೀಂಕೋರ್ಟ್‍ನ ತೀರ್ಪು ವಿರೋಧಪಕ್ಷಗಳ ನಾಟಕವನ್ನು ಜನರ ಮುಂದೆ ಬಹಿರಂಗ ಮಾಡಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ಇ.ಡಿ ಪ್ರಕರಣವನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಜಾರಿ ನಿದೇಶನಾಲಯ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು ಎಂದು ನಮಗೆ ಗೊತ್ತಿರಲಿಲ್ಲ. ಇಂದು ತ್ರಿಸದಸ್ಯ ಪೀಠದ ಮುಂದೆ ವಿಚಾರಣೆ ಇದೆ ಎಂದು ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ನನಗೆ ತಿಳಿಸಿದರು. ತೀರ್ಪು ನಮ್ಮ ಪರವಾಗಿದೆ. ಇದನ್ನು ಸ್ವಾಗತಿಸುತ್ತೇವೆ ಎಂದರು.
ಹೈಕೋರ್ಟ್‍ನ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಎಲ್ಲದರಲ್ಲೂ ರಾಜಕೀಯ ಮಾಡಬೇಡಿ ಎಂದು ಸುಪ್ರೀಂಕೋರ್ಟ್ ಕಟುವಾಗಿ ಹೇಳಿದೆ. ಇದು ನ್ಯಾಯಕ್ಕೆ ಸಂದ ಜಯ. ಸಂವಿಧಾನದ ಪ್ರಕಾರ ನ್ಯಾಯಮೂರ್ತಿಗಳು ನಮಗೆ ನ್ಯಾಯದಾನ ಮಾಡಿದ್ದಾರೆ. ಬಿಜೆಪಿ, ಜೆಡಿಎಸ್ ಕೂಡ ಪ್ರತಿಭಟನೆ ಹಾಗೂ ಇತರೆ ನಾಟಕೀಯ ನಡವಳಿಕೆಗಳು ಜನರ ಮುಂದೆ ಬಹಿರಂಗಗೊಂಡಿವೆ ಎಂದರು.
ನ್ಯಾಯಾಲಯಗಳು ದೇವರ ಸಮಾನ ಎಂದು ಮತ್ತೊಮ್ಮೆ ಸಾಬೀತಾಗಿವೆ. ಸುಪ್ರೀಂಕೋರ್ಟ್ ತಕ್ಕ ಪಾಠ ಕಲಿಸಿದ ಬಳಿಕವಾದರೂ ಬಿಜೆಪಿ, ಜೆಡಿಎಸ್ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ರಾಜಕೀಯಕ್ಕಾಗಿ ಜನರನ್ನು ದಾರಿ ತಪ್ಪಿಸುವುದನ್ನು ಬಿಡಬೇಕು ಎಂದು ಹೇಳಿದರು.





