ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ, ಚರಂಡಿ ನಿರ್ಮಾಣ ಮಾಡಿದ್ದರೆ ಜನರು ಉದ್ಧಾರ ಆಗ್ತಾರಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ಜನರ ಜೀವನ ಉದ್ಧಾರ ಆಗಿದೆ. ಆದರೆ, ಬರೀ ರಸ್ತೆ, ಚರಂಡಿಗಳನ್ನೇ ಮಾಡ್ತಾ ಇದ್ದರೆ ಜನರು ಉದ್ಧಾರ ಆಗ್ತಾರಾ ಎಂದು ಕೇಳಿದ್ದಾರೆ. ಯಾರು ಗ್ಯಾರಂಟಿ ಕಾರ್ಯಕ್ರಮವನ್ನು ಟೀಕೆ ಮಾಡುತ್ತಾರೆ. ಈ ಕಾರ್ಯಕ್ರಮ ಯಾರು ಒಪ್ಪೋದಿಲ್ಲವೋ ಅವರಿಗೆ ಒಂದು ಪ್ರಶ್ನೆ. ಈ ಜನ ಏನಾಗಬೇಕು? ಆಯ್ತಪ್ಪ ನಾವು ಗ್ಯಾರಂಟಿ ಕೊಡೋದಿಲ್ಲ. ನಾಳೆಯಿಂದ ನಿಲ್ಸಿ ಬಿಡೋಣ. ಈ 58 ಸಾವಿರ ಕೋಟಿ ರೂ. ಏನು ನಾವು ಕೊಡ್ತಾ ಇದ್ದೀವಿ, ನಾಳೆ ನಿಲ್ಲಿಸ್ತೀವಿ. ಆದರೆ, ನೀವು ರಸ್ತೆ ಮಾಡೋದ್ರಿಂದ, ಚರಂಡಿ ಮಾಡೋದ್ರಿಂದ ಅಥವಾ ಇನ್ನೇನೊ ಕಾರ್ಯಕ್ರಮ ಮಾಡೋದ್ರಿಂದ ಆ ಬಡವರ ಜೀವನ ಏನಾಗುತ್ತದೆ? ಉದ್ಧಾರ ಆಗುತ್ತದಾ ಎಂದು ಪ್ರಶ್ನೆ ಮಾಡಿದ್ದಾರೆ. ಭೌತಿಕ ಸೌಲಭ್ಯಕ್ಕಿಂತ ಜನರ ಜೀವನಕ್ಕೆ ಬೇಕಾದ ಕಾರ್ಯಕ್ರಮ ಕೊಡಬೇಕು ಎಂದು ಪ್ರಸ್ತಾಪಿಸಿದರು.
ಇದನ್ನೂ ಓದಿ:-ಇಂದಿರಾಗಾಂಧಿ ತ್ಯಾಗದ ಮುಂದೆ ನಮ್ಮದೇನು ಇಲ್ಲ : ಖರ್ಗೆ ಭಾವುಕ ನುಡಿ
ಹಾಗಂತ ನಾವು ರಸ್ತೆ ಮಾಡೋದನ್ನು ನಿಲ್ಲಿಸಿಲ್ಲ. ಮನೆಗಳನ್ನು ಕಟ್ಟೋದನ್ನು ನಿಲ್ಲಿಸಿಲ್ಲ. ಯಾವ ಕಾರ್ಯಕ್ರಮವನ್ನೂ ನಿಲ್ಲಿಸಿಲ್ಲ. ಕೆಲಸ ಮಾಡಲು ಒಂದಿಷ್ಟು ನಿಧಾನ ಆಗಿರಬಹುದು ಎಂದು ಒಪ್ಪಿಕೊಂಡರು. ಆದರೆ, ಬಹಳ ಮುಖ್ಯವಾಗಿ ಮನುಷ್ಯನ ಜೀವನ ಸಾವಿರಾರು ವರ್ಷದ ಶೋಷಣೆ, ಅದು ಮುಂದುವರಿಯಬಾರದು ಅನ್ನೋದೆ ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಗ್ಯಾರಂಟಿ ಕೊಡುತ್ತೇವೆ ಎಂದು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.





