ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಹಸುಗಳ ಮೇಲೆ ಕಿಡಿಗೇಡಿಗಳ ಕ್ರೌರ್ಯ ಹೆಚ್ಚಾಗುತ್ತಿದ್ದು, ಕ್ರೌರ್ಯ ಎಸಗುತ್ತಿರುವ ವ್ಯಕ್ತಿಗಳ ಹಿನ್ನೆಲೆ ಪರಿಶೀಲನೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂತಹ ಘಟನೆ ಆಗದಂತೆ ಏನಾದರೂ ಉಪಾಯ ಕಂಡು ಹಿಡಿಯಬೇಕಾಗಿದೆ.
ಈ ಪ್ರಕರಣಗಳ ಕುರಿತು ಇಂದು ಬೆಳಿಗ್ಗೆ ಹಿರಿಯ ಅಧಿಕಾರಿಗಳ ಜೊತೆ ಗಂಭೀರವಾಗಿ ಚರ್ಚೆ ಮಾಡಿದ್ದೇನೆ. ಯಾರು ಈ ರೀತಿಯ ಮನಸ್ಥಿತಿಯವರು ಇದ್ದಾರೋ ಅಂತಹವರನ್ನು ಪತ್ತೆ ಹಚ್ಚಬೇಕು. ಇಂತಹ ಕೃತ್ಯಗಳು ಸಂಘಟನೆಯಿಂದ ಮಾಡ್ತಾ ಇರೋದಾ? ಅಥವಾ ಏಕಾಂಗಿಯಾಗಿ ಮಾಡಿರೋದಾ? ಯಾರ ಪ್ರಚೋದನೆಯಿಂದ ಆಗ್ತಿದೆಯಾ? ಎಂದು ತನಿಖೆಗೆ ಸೂಚನೆ ನೀಡಿದ್ದೇನೆ. ಇದರ ಬಗ್ಗೆ ಪರಿಶೀಲನೆ ಮಾಡಿ ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡ್ತೀವಿ ಎಂದು ತಿಳಿಸಿದರು.
ಇನ್ನು ಸೆಂಟ್ರಲ್ ಜೈಲು ವಿಭಜನೆ ಕುರಿತು ಮಾತನಾಡಿದ ಅವರು, ವಿಭಜನೆ ಮಾಡುವ ಪ್ರಸ್ತಾಪ ಸದ್ಯ ಸರ್ಕಾರದ ಮುಂದೆ ಇಲ್ಲ. ಆದರೆ ಬಂಧಿಖಾನೆಗಳನ್ನು ಬಿಗಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಸೆಕ್ಯುರಿಟಿಯನ್ನು ಮತ್ತಷ್ಟು ಜಾಸ್ತಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.