ಬೆಂಗಳೂರು: ರಾಷ್ಟ್ರ ರಾಜಕಾರಣಕ್ಕೆ ಹೋಗುವ ಪ್ರಶ್ನೆಯೇ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು, ತಮಗೆ ಯಾವ ರೀತಿಯ ಹುದ್ದೆ ನೀಡಿದ್ದಾರೋ ಗೊತ್ತಿಲ್ಲ, ವಿಷಯ ತಿಳಿದ ಬಳಿಕ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಂದೊಂದು ಪತ್ರಿಕೆಗಳಲ್ಲಿ ಒಂದೊಂದು ರೀತಿ ಬಂದಿದೆ. ಯಾವ ರೀತಿ ಹುದ್ದೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಓಬಿಸಿ ಸಮುದಾಯಗಳ ಸಭೆ ಮಾಡಿ ಎಂದು ಎಐಸಿಸಿಯ ಓಬಿಸಿ ಘಟಕದ ಅಧ್ಯಕ್ಷರು ಸೂಚನೆ ನೀಡಿದರು. ಅದರಂತೆ 15ರಂದು ಕರ್ನಾಟಕದಲ್ಲಿ ರಾಷ್ಟ್ರೀಯ ಸಭೆ ನಿಗದಿ ಮಾಡಿದ್ದೇನೆ ಎಂದರು.
ಎಐಸಿಸಿ ಹುದ್ದೆ ಕೊಟ್ಟಾಗ ಅದನ್ನು ಬಿಟ್ಟು ಓಡಿಹೋಗಲು ಸಾಧ್ಯವಿಲ್ಲ. ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ. ನನ್ನನ್ನು ಸಂಚಾಲಕನನ್ನಾಗಿ ಮಾಡಲಾಗಿದೆಯೋ ಅಥವಾ ಯಾವ ರೀತಿ ಹುದ್ದೆ ನೀಡಿದ್ದಾರೆ ಎಂದು ತಿಳಿಯದೆ ನಾನು ಪ್ರತಿಕ್ರಿಯಿಸುವುದಿಲ್ಲ. ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇನೆ. ತಾವು ಯಾವುದೇ ಹುದ್ದೆಯನ್ನೂ ಕೇಳಿರಲಿಲ್ಲ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಲ್ಲಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಅವುಗಳನ್ನು ಬಡವರ ಅಭಿವೃದ್ಧಿಗಾಗಿ ರೂಪಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ಸೇತುವೆಗಳ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗಳಿಗೆ ಹಣ ನೀಡಲಾಗುತ್ತಿದೆ. ಪಕ್ಷಾತೀತವಾಗಿ ಎಲ್ಲಾ ಪಕ್ಷದವರಿಗೂ ಹಣ ನೀಡುತ್ತಿರುವುದಾಗಿ ಹೇಳಿದರು.





