Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ರಾಜ್ಯ ರಾಜಕಾರಣ ಕುರಿತು ಚರ್ಚಿಸಲು ಯಾರೂ ದೆಹಲಿಗೆ ಬರಬೇಡಿ: ಹೈಕಮಾಂಡ್‌ ಸ್ಪಷ್ಟ ಸಂದೇಶ

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆ ಕಾರ್ಯಕ್ರಮದ ಒತ್ತಡದಲ್ಲಿರುವುದರಿಂದ ರಾಜ್ಯ ರಾಜಕಾರಣ ಕುರಿತು ಚರ್ಚಿಸಲು ಯಾರೂ ದೆಹಲಿಗೆ ಬರಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ದೆಹಲಿ ಭೇಟಿಗೆ ಮುಂದಾಗಿದ್ದರು. ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲ ಅವರ ಭೇಟಿಗೆ ಸಮಯ ಕೇಳಿದರು. ಆದರೆ ಎಲ್ಲಾ ನಾಯಕರು ಬಿಹಾರ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದು ಭೇಟಿಗೆ ಸಮಯವಿಲ್ಲ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ.

ಹೀಗಾಗಿ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳದೆ ಬೆಳಗಾವಿಯಲ್ಲೇ ಉಳಿದಿದ್ದಾರೆ. ಈ ನಡುವೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. 6 ದಿನಗಳ ಅಹೋರಾತ್ರಿ, ಧರಣಿ, ಹಿಂಸಾಸ್ವರೂಪ ಪಡೆದುಕೊಳ್ಳುತ್ತಿದ್ದು, ಕಾನೂನು ಸುವ್ಯಸ್ಥೆಯ ಸವಾಲನ್ನು ತಂದು ಒಡ್ಡಿದೆ. ಈ ಕಾರಣಕ್ಕಾಗಿ ಸತೀಶ್ ಜಾರಕಿಹೊಳಿ ದೆಹಲಿ ಭೇಟಿಯನ್ನು ಮುಂದೂಡಿದ್ದಾರೆ ಎನ್ನಲಾಗುತ್ತಿದೆ.

ಸಂಪುಟ ಪುನರ್‍ರಚನೆಯ ಕುರಿತು ನವೆಂಬರ್ 15ಕ್ಕೆ ದೆಹಲಿಗೆ ಭೇಟಿ ನೀಡಿದ ವೇಳೆಯಲ್ಲಿ ವರಿಷ್ಠರ ಜೊತೆಗೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಆಕಾಂಕ್ಷಿಗಳು ದೆಹಲಿ ಯಾತ್ರೆ ಆರಂಭಿಸಿದ್ದಾರೆ. ನಾ ಮುಂದು ತಾ ಮುಂದು ಎಂದು ವರಿಷ್ಠರ ಭೇಟಿಗೆ ಸಮಯ ಕೇಳುತ್ತಿದ್ದಾರೆ.

ರಾಹುಲ್‍ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಗಾಂಧಿ, ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಜೈರಾಮ ರಮೇಶ್ ಸೇರಿದಂತೆ ಬಹತೇಕ ನಾಯಕರು ಬಿಹಾರದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ಧಾರೆ. ಹೀಗಾಗಿ ದೆಹಲಿಗೆ ಬರಬೇಡಿ, ರಾಜಕಾರಣ ಚರ್ಚೆಗೆ ಸಮಯ ಕೇಳಬೇಡಿ ಎಂದು ರಾಜ್ಯದ ನಾಯಕರಿಗೆ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ.

Tags:
error: Content is protected !!