ಬೆಂಗಳೂರು: ಜಾತಿ ಜನಗಣತಿಯ ವೇಳೆ ಉಪಪಂಗಡಗಳ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಗೆ ಯಾರ ವಿರೋಧವೂ ಇಲ್ಲ. ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ ಕೆಲವು ಜಾತಿಗಳವರು ಉದ್ಯೋಗ, ಶಿಕ್ಷಣದ ಮೀಸಲಾತಿಗಾಗಿ ಲಿಂಗಾಯತ ವೀರಶೈವ ಎಂದು ಬರೆಸದೆ ವೃತ್ತಿ ಆಧಾರಿತ ಜಾತಿಯ ಹೆಸರನ್ನು ನಮೂದಿಸುತ್ತಾರೆ ಎಂದರು.
ಯಾರು, ಯಾವುದೇ ಧರ್ಮವನ್ನಾದರೂ ಪಾಲನೆ ಮಾಡಲು ಅವಕಾಶ ಇದೆ. ಆದರೆ ಜಾತಿ ಜನಗಣತಿಯ ಸಂದರ್ಭದಲ್ಲಿ ಸ್ಪಷ್ಟವಾದ ನಮೂದು ಮಾಡುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಮಠಾಧೀಶರು, ಸಮುದಾಯದ ಮುಖಂಡರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜನರಲ್ಲಿ ತಿಳುವಳಿಕೆ ಮೂಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲೂ ಮತ್ತಷ್ಟು ಸಮಸ್ಯೆಗಳಾಗುತ್ತವೆ. ವೀರಶೈವ ಲಿಂಗಾಯತ ಸಮುದಾಯದಲ್ಲೇ 100ಕ್ಕೂ ಹೆಚ್ಚು ಒಳಪಂಗಡಗಳಿವೆ. ಎಲ್ಲರಿಗೂ ಸರಿಯಾದ ಮಾಹಿತಿ ನೀಡಿದರೆ ನೈಜ್ಯ ದತ್ತಾಂಶ ಸಿಗಲು ಸಾಧ್ಯ ಎಂದು ತಿಳಿಸಿದರು.
ಇನ್ನು ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಿಸಲು ನಿಯಮ ಬಾಹಿರವಾಗಿ ನಿಷೇಧ ಹೇರಲಾಗಿದೆ. ತಮಿಳುನಾಡು ಸೇರಿದಂತೆ ರಾಜ್ಯದ ಗಡಿಭಾಗಗಳಲ್ಲಿ ನೆರೆಯ ರಾಜ್ಯಗಳಿಂದ ಸಾವಿರಾರು ಸಂಖ್ಯೆಯ ಜಾನುವಾರುಗಳು ರಾಜ್ಯದ ಅರಣ್ಯ ಪ್ರದೇಶದೊಳಗೆ ಬರುತ್ತಿದ್ದು, ಇಲ್ಲಿನ ಹಸಿರು ಹುಲ್ಲುಗಾವಲನ್ನು ಬರಿದು ಮಾಡುತ್ತಿವೆ. ದಟ್ಟಾರಣ್ಯ ಪ್ರದೇಶದಲ್ಲಿರುವ ವನ್ಯಜೀವಿಗಳಿಗೆ ಆಹಾರದ ಕೊರತೆ ಎದುರಾಗುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳ ಮೇವಿಗೆ ಅವಕಾಶ ನಿರಾಕರಿಸಲಾಗಿದೆ. ಇತ್ತೀಚೆಗೆ ತಾಯಿ ಹಾಗೂ ನಾಲ್ಕು ಮರಿಗಳ ವಿಷಪ್ರಾಶನ ಪ್ರಕರಣದಲ್ಲಿ ಜಾನುವಾರುಗಳ ಮೇವಿನ ಹಿನ್ನೆಲೆಯಿತ್ತು. ಹೀಗಾಗಿ ಅರಣ್ಯ ಕಾಯ್ದೆಯ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.





