ಬೆಂಗಳೂರು: ಕಾಂಗ್ರೆಸ್‍ನಲ್ಲಿ ಎಲ್ಲವೂ ತಣ್ಣಗಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶಾಸಕರ ಜೊತೆ ಸಭೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎವೆರಿತಿಂಗ್ ಕೂಲ್ ಟುಡೇ ಸಭೆಯ ಚರ್ಚೆಗಳ ಬಗ್ಗೆ ನಾಳೆ ವಿವರವಾಗಿ ಮಾತನಾಡುತ್ತೇನೆ. ಬೆಂಗಳೂರಿನಿಂದ ಹೊರಡುವ ಮುನ್ನ ಸ್ಪಷ್ಟ ಮಾಹಿತಿ ನೀಡಿಯೇ ಹೋಗುತ್ತೇನೆ. ಎಲ್ಲದಕ್ಕೂ ವಿರಾಮ ಇದೆ ಎಂದು ಹೇಳಿದ್ದಾರೆ.
ದೆಹಲಿಯಿಂದ ಆಗಮಿಸಿದ ಸುರ್ಜೇವಾಲ ಮೂರು ದಿನಗಳ ಸಭೆಯಲ್ಲಿ ಶಾಸಕರ ಜೊತೆ ಸರಣಿ ಸಭೆಗಳನ್ನು ನಡೆಸಲಿದ್ದು, ಎರಡನೇ ಹಂತದಲ್ಲಿ 60 ಶಾಸಕರೊಂದಿಗೆ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ. ಜೊತೆಗೆ ಸಚಿವರ ಜೊತೆ ಕೂಡ ಮಾತುಕತೆ ನಡೆಸಲಿದ್ದಾರೆ.
ಕೆಲದಿನಗಳ ಹಿಂದೆ ಶಾಸಕರ, ಸಚಿವರ ಹೇಳಿಕೆಗಳಿಂದ ಪಕ್ಷದಲ್ಲಿ ಗೊಂದಲಗಳಾಗಿತ್ತು. ಅದಕ್ಕೆ ಕಡಿವಾಣ ಹಾಕಲು ಸುರ್ಜೇವಾಲ ರಾಜ್ಯಕ್ಕಾಗಮಿಸಿದ್ದಾರೆ. ಸಚಿವರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರ ಕಾರ್ಯವೈಖರಿ ಬಗ್ಗೆ ಕೂಡ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ರಾಜ್ಯ ರಾಜಕೀಯದ ಬಗ್ಗೆ ಸುರ್ಜೇವಾಲ ನೀಡುವ ವರದಿ ಕುತೂಹಲ ಕೆರಳಿಸಿದೆ. ಮೂರು ದಿನಗಳ ಸಭೆಯ ನಂತರ ಮುಂದಿನ ವಾರ ಮತ್ತೊಂದು ಸುತ್ತಿನ ಸಭೆ ನಡೆಸುವ ಸಾಧ್ಯತೆಯಿದೆ.





