ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರನ್ನು ಔತಣಕೂಟಕ್ಕೆ ಕರೆದಿರುವ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಚಿವರ ಜೊತೆ ಎರಡು ಮೂರು ಬಾರಿ ಔತಣಕೂಟ ಏರ್ಪಡಿಸಿದ್ದಾರೆ. ಸಂಪುಟ ಸಚಿವರ ಜೊತೆ ಪಕ್ಷ ಸಂಘಟನೆ, ಮುಂಬರುವ ಸ್ಥಳೀಯ ಸಂಸ್ಥೆಗಳ ವಿಚಾರದ ಬಗ್ಗೆ ಮಾತನಾಡಬಹುದು ಎಂದರು.
ಔತಣಕೂಟಕ್ಕೆ ಸಚಿವರನ್ನು ಆಹ್ವಾನಿಸಿರುವುದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಸಂಪುಟ ಪುನಾರಚನೆ ವಿಷಯ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.
ಒಂದು ವೇಳೆ ಸಚಿವ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಹೈಕಮಾಂಡ್ ಸೂಚಿಸಿದರೆ ಬಿಟ್ಟುಕೊಡಬೇಕಾಗುತ್ತದೆ. ಪಕ್ಷದಲ್ಲಿ ಹಿರಿಯ ನಾಯಕರು ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳು ಸಾಕಷ್ಟು ಮಂದಿ ಇದ್ದಾರೆ ಎಂದು ತಿಳಿಸಿದರು.





