Mysore
26
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಸವಲತ್ತು ಪಡೆಯಲ್ಲ: ಶಾಸಕ ಶರಣಗೌಡ ಕಂದಕೂರ್‌

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯುವುದಿಲ್ಲ ಎಂದು ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಕಲಾಪದ ಚರ್ಚೆಯಲ್ಲಿ ಭಾಗವಹಿಸಿದಂತೆ ಈ ವರ್ಷದ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸುವುದಾಗಿ ಅವರು ಹೇಳಿದ್ದಾರೆ.

ಅಧಿವೇಶನದ ಸಂದರ್ಭದಲ್ಲಿ ಸರ್ಕಾರ ಶಾಸಕರಿಗೆ ಒದಗಿಸುವ ಊಟ, ಉಪಹಾರ, ಚಹಾ ಸೇರಿದಂತೆ ಯಾವುದೇ ತರಹದ ಭತ್ಯೆ, ವಸತಿ ವ್ಯವಸ್ಥೆ ಪಡೆಯುವುದಿಲ್ಲ. ಆದರೆ, ಹೊರಗಿನಿಂದ ಊಟ ತರಿಸಿಕೊಂಡು ಬಳಸಲು ಅನುವು ಮಾಡಿಕೊಡಬೇಕೆಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ಬೆಳಗಾವಿ ಚಳಿಗಾಲ ಅಧಿವೇಶನ ಆರಂಭ

ಉತ್ತರ ಕರ್ನಾಟಕದ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ನಡೆಸುವ ಚಳಿಗಾಲದ ಅಧಿವೇಶನದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಳೆದ ಅಧಿವೇಶನದಲ್ಲಿ ನಡೆದ ಚರ್ಚೆಗಳ ವಿಷಯಗಳ ಕುರಿತು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ರಾಜ್ಯದ ಜನತೆಗೆ ಇದುವರೆಗೂ ತಿಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎರಡು ವಾರಗಳ ಕಾಲ ಪ್ರವಾಸಕ್ಕೆ ಬಂದಂತೆಯೇ ಆಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಕೇವಲ ಚರ್ಚೆ, ಮಾತುಗಳಿಂದ ಜನ ಕಲ್ಯಾಣ ಅಸಾಧ್ಯ. ಉತ್ತರ ಕರ್ನಾಟಕದ ರೈತರು, ಬಡವರು, ಕಾರ್ಮಿಕರು ಮತ್ತು ಜನಸಾಮಾನ್ಯರು ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಹೊಂದಿದ್ಧಾರೆ. ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಅನುದಾನ ತರುತ್ತಾರೆ ಎಂಬ ಆಶಾಭಾವನೆ ಹೊಂದಿರುತ್ತಾರೆ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಮುಂಗಾರು ಮಳೆ ಮತ್ತು ಪ್ರವಾಹದಿಂದ ಲಕ್ಷಾಂತರ ರೈತರ ಕೋಟ್ಯಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಆದರೂ ರಾಜ್ಯ ಸರ್ಕಾರ ಇದುವರೆಗೆ ಒಂದು ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

Tags:
error: Content is protected !!