ಕಲಬುರಗಿ : ನಿತೀಶ್ ಕುಮಾರ್ ಮಹಾ ಘಟಬಂಧನ್ ತೊರೆಯುವ ಬಗ್ಗೆ ಮೊದಲೆ ಗೊತ್ತಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಮಗ ತೇಜಸ್ವಿ ಯಾದವ್ ಅವರೊಂದಿಗೆ ಮಾತನಾಡುವಾಗ ನಿತೀಶ್ ಮಹಾಘಟಬಂಧನ್ ತೊರೆಯುವ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿಸಿದರು.
ಅವರು ಹೇಳಿದ್ದು ಇಂದು ನಿಜವಾಗಿದೆ, ಆಯಾರಾಮ್ ಗಯಾರಾಮ್ ಸಂಸ್ಕೃತಿವುಳ್ಳ ಅನೇಕ ರಾಜಕಾರಣಿಗಳು ದೇಶದಲ್ಲಿದ್ದಾರೆ ಎಂದು ಟೀಕಿಸಿದರು.
ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟ ತೊರೆಯುತ್ತಿರುವ ಬಗ್ಗೆ ಮುಂಚೆಯೇ ಗೊತ್ತಿದ್ದರಿಂದ ಅವರೊಂದಿಗೆ ಮಾತುಕತೆಗೆ ಯತ್ನಿಸಿದ್ದೆವು,ಅಂತಿಮವಾಗಿ ಅವರು ಮೈತ್ರಿಕೂಟ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದರು.
ನಿತೀಶ್ ಹೊರ ಹೋಗಲು ಬಯಸಿದ್ದರಿಂದ ಮೈತ್ರಿ ತೊರೆದಿದ್ದಾರೆ. ಆದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಖರ್ಗೆ ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಕುರಿತು ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಚರ್ಚಿಸಲು ಆರು ಜನರ ಸಮಿತಿ ರಚಿಸಲಾಗಿದೆ.ಇನ್ನೂ ಕೆಲವೆಡೆ ಒಮ್ಮತಕ್ಕೆ ಬಂದಿಲ್ಲ ಎಂದು ಖರ್ಗೆ ಹೇಳಿದರು.